ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರ ವೈಯಕ್ತಿಕ ಸಹಾಯಕ (ಪಿಎ) ನಂತೆ ನಟಿಸಿ ಪ್ರಸಿದ್ಧ ‘ಬಡೇಮಿಯಾ’ ರೆಸ್ಟೋರೆಂಟ್‌ನ ಮಾಲೀಕರಿಗೆ 11.2 ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಬಂಧಿಸಲಾಗಿದೆ.
ಪೊಲೀಸ್ ವರದಿಗಳ ಪ್ರಕಾರ, ಆರೋಪಿಯನ್ನು ಸೂರಜ್ ಆರ್ ಕಲಾವ್ ಎಂದು ಗುರುತಿಸಲಾಗಿದೆ. ಆತ ರೆಸ್ಟೋರೆಂಟ್ ನಿಂದ ನೂರಾರು ಪ್ಲೇಟ್ ಊಟ ಆರ್ಡರ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆತ ರೆಸ್ಟೋರೆಂಟ್ ಮಾಲೀಕರ ಮಗಳಿಗೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರವೇಶಕ್ಕೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದನಂತೆ.
ರೆಸ್ಟೊರೆಂಟ್ ಮಾಲೀಕ ಜಮಾಲ್ ಮೊಹಮ್ಮದ್ ಯಾಸಿನ್ ಶೇಖ್ ಈ ಬಗ್ಗೆ ಒಂದೆರಡು ದಿನಗಳ ಹಿಂದೆ ದೂರು ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಆರೋಪಿ ಕಳೆದ ತಿಂಗಳು ರೆಸ್ಟೋರೆಂಟ್ ಮಾಲೀಕರಿಗೆ ಕರೆ ಮಾಡಿ ಸಂಸದ ಅರವಿಂದ್ ಸಾವಂತ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯ ಕೋರಿಕೆಯಂತೆ ರೆಸ್ಟೋರೆಂಟ್ ಮಧ್ಯ ಮುಂಬೈನ ಲಾಲ್‌ಬಾಗ್‌ನಲ್ಲಿರುವ ಭಾರತ್ ಮಾತಾ ಜಂಕ್ಷನ್‌ನಲ್ಲಿರುವ ವಿಳಾಸಕ್ಕೆ ಆರ್ಡರ್ ಮಾಡಿದ್ದ ಊಟ ಕಳುಹಿಸಿಕೊಟ್ಟಿದೆ. ಇದಲ್ಲದೆ, ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಆತ ಜುಲೈ 2 ರಿಂದ ಜುಲೈ 29 ರ ನಡುವೆ ಪ್ರತಿದಿನ ಆಹಾರವನ್ನು ಆರ್ಡರ್ ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಂದೇ ಸಲ ಬಿಲ್ ಪಾವತಿಸುವುದಾಗಿ ಸೂರಜ್ ಆರ್ ಕಲಾವ್ ಭರವಸೆ ನೀಡಿದ್ದಾಗಿ ರೆಸ್ಟೋರೆಂಟ್ ಮಾಲೀಕರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಹೆಚ್ಚುವರಿಯಾಗಿ, ಶಿವಸೇನೆ (ಯುಬಿಟಿ) ನಾಯಕರನ್ನು ಶಾಸಕಾಂಗ ಮಂಡಳಿಗೆ ಆಯ್ಕೆ ಮಾಡಿದ ದಿನ, ಆರೋಪಿಯು 200 ಪ್ಲೇಟ್ ವೆಜ್ ಮತ್ತು ನಾನ್ ವೆಜ್ ಬಿರಿಯಾನಿ ಹಾಗು ಗುಲಾಬ್ ಜಾಮೂನ್‌ಗಳನ್ನು ಮಜಗಾಂವ್ ಪ್ರದೇಶದ ಕಳಿಸಿಕೊಡುವಂತೆ ಕೇಳಿದ್ದ. ಮುಂಗಾರು ಅಧಿವೇಶನ ಮುಗಿದ ನಂತರ 2 ಲಕ್ಷ ರೂಪಾಯಿ ಬಿಲ್ ಪಾವತಿಸುವುದಾಗಿ ಆರೋಪಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ತಿಳಿಸಿಲಾಗಿದೆ.
ಏತನ್ಮಧ್ಯೆ ಸೂರಜ್ ಆರ್ ಕಲಾವ್ ಸಂಸದ ಅರವಿಂದ್ ಸಾವಂತ್ ಅವರಿಗೆ ನಿಕಟವರ್ತಿಯಾಗಿರುವುದರಿಂದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ಮಗಳಿಗೆ ಪ್ರವೇಶ ಪಡೆಯಬಹುದೇ ಎಂದು ರೆಸ್ಟೋರೆಂಟ್ ಮಾಲೀಕರು ಕೇಳಿದ್ದಾರೆ. ಅವರ ಕೋರಿಕೆಯ ಮೇರೆಗೆ, ಆರೋಪಿ ಕಾನೂನು ಕಾಲೇಜಿನಲ್ಲಿ ಪ್ರವೇಶಾತಿ ಖಾತರಿಪಡಿಸುವುದಾಗಿ ಭರವಸೆ ನೀಡಿ ಅವರಿಂದ 9.27 ಲಕ್ಷ ರೂ.ಗಳನ್ನು ತೆಗೆದುಕೊಂಡಿದ್ದ ಎಂದು ದೂರುದಾರರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಕಲಾವ್‌ಗೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸದಿದ್ದಾಗ, ತಾನು ಮೋಸ ಹೋಗಿರುವುದು ರೆಸ್ಟೋರೆಂಟ್ ಮಾಲೀಕರಿಗೆ ಅರಿವಾಯಿತು.
ಘಟನೆಯ ನಂತರ ಪೊಲೀಸರು ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಇತರ ಸಂಬಂಧಿತ ಅಪರಾಧಗಳಿಗಾಗಿ ಪ್ರಕರಣವನ್ನು ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಯು ಇನ್ನೂ ಮುಂದುವರೆದಿದೆ.