ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟುವ ಸಲುವಾಗಿ ದುಬಾರಿ ದಂಡವನ್ನು ವಿಧಿಸಲಾಗುತ್ತದೆ. ಇಷ್ಟಾದರೂ ಸಹ ಇದಕ್ಕೆ ಬೆಲೆ ಕೊಡದೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಇದೀಗ ಈ ರೀತಿ ಸರಣಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರನಿಗೆ ಚಿತ್ರದುರ್ಗ ಪೊಲೀಸರು ಶಾಕ್ ನೀಡಿದ್ದಾರೆ.
ಪ್ರಕರಣದ ವಿವರ: ಚಿತ್ರದುರ್ಗ ನಗರದ ಚಿಕ್ಕಪೇಟೆ ಬಡಾವಣೆ ನಿವಾಸಿ ಯುವಕ ಇತ್ತೀಚೆಗೆ ಪ್ರಮುಖ ರಸ್ತೆಯಲ್ಲಿ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೊರಟಿದ್ದ. ಅಷ್ಟೇ ಅಲ್ಲ, ಈತ ಹೆಲ್ಮೆಟ್ ಹಾಕಿರಲಿಲ್ಲ. ಡಿಎಲ್ ಸಹ ಇರಲಿಲ್ಲ ಅಲ್ಲದೆ ಆರ್‌ಸಿ ಬುಕ್ ಜೊತೆಗಿರಲಿಲ್ಲ. ಇದೆಲ್ಲದಕ್ಕಿಂತ ಮಿಗಿಲಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ.
ಈತನ ವಾಹನ ಅಡ್ಡಗಟ್ಟಿದ ಪೊಲೀಸರು ದಾಖಲೆ ಪತ್ರ ಕೇಳಿದಾಗ ಅವರೊಂದಿಗೆ ವಾಗ್ವಾದಕ್ಕೂ ಇಳಿದಿದ್ದ. ಬಳಿಕ ಪೊಲೀಸರು ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ 18,000 ರೂಪಾಯಿ ದಂಡ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪ್ರಕರಣ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ನ್ಯಾಯಾಧೀಶರು 18 ಸಾವಿರ ರೂಪಾಯಿ ದಂಡ ಶುಲ್ಕ ಪಾವತಿಸಲು ಸೂಚಿಸಿದ್ದು ಒಂದು ವೇಳೆ ಪಾವತಿ ಮಾಡದಿದ್ದರೆ ಒಂದೂವರೆ ವರ್ಷಗಳ ಕಾಲ ಜೈಲುವಾಸ ಎಂದು ಹೇಳಿದ್ದಾರೆ. ಕಡೆಗೆ ಯುವಕ 18 ಸಾವಿರ ರೂಪಾಯಿ ದಂಡ ಪಾವತಿಸಿ ಜೈಲು ವಾಸದಿಂದ ಪಾರಾಗಿದ್ದಾನೆ.