ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿಗಳಿಗೆ ಲಂಚ ಕೊಡಲು ಯತ್ನಿಸಿದ ವ್ಯಕ್ತಿ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಗುಜರಾತ್‌ನ ಗೋಧ್ರಾದಲ್ಲಿ ವಿಚಾರಣೆಯ ವೇಳೆ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರಿಗೆ 35,000 ರೂಪಾಯಿ ಲಂಚ ನೀಡಲು ಮುಂದಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆರೋಪಿ ಬಾಪುಭಾಯಿ ಸೋಲಂಕಿ ಮುಚ್ಚಿದ ಲಕೋಟೆಯಲ್ಲಿ ಲಂಚದ ಹಣ ಹಸ್ತಾಂತರಿಸುವ ಮೂಲಕ ಪ್ರಸ್ತುತ ನಡೆಯುತ್ತಿರುವ ತನ್ನ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೇಳಿಕೊಂಡಿದ್ದನು. ನ್ಯಾಯಾಧೀಶರು ತಕ್ಷಣವೇ ಅಧಿಕಾರಿಗಳಿಗೆ ವಿಷಯ ತಿಳಿಸಿದ ನಂತರ ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನು ಬಂಧಿಸಲಾಯಿತು.
ಮಹಿಸಾಗರ ಜಿಲ್ಲೆಯ ವೀರ್‌ಪುರ ತಹಸಿಲ್‌ನ ಸರಡಿಯಾ ಗ್ರಾಮದ ನಿವಾಸಿ ಸೋಲಂಕಿ 2023 ರಿಂದ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ಎದುರಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪನಮ್ ಯೋಜನೆಯಡಿ ಭದರ್ ಕಾಲುವೆ ವಿತರಣಾ ಉಪವಿಭಾಗದ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಈ ಪ್ರಕರಣದ ವಿಳಂಬದಿಂದ ಹತಾಶೆಗೊಂಡು ಶೀಘ್ರವೇ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ವಿಚಾರಣೆಯ ಸಮಯದಲ್ಲಿ, ಸೋಲಂಕಿ ಲಕೋಟೆಯೊಂದಿಗೆ ನ್ಯಾಯಾಧೀಶರನ್ನು ಸಂಪರ್ಕಿಸಿ ತ್ವರಿತ ವಿಚಾರಣೆಗೆ ವಿನಂತಿಸಿದ್ದ. ನ್ಯಾಯಾಧೀಶರು ಲಕೋಟೆಯನ್ನು ಸ್ವೀಕರಿಸಲು ನಿರಾಕರಿಸಿ ಅದನ್ನು ತೆರೆದು ತೋರಿಸುವಂತೆ ಸೋಲಂಕಿಗೇ ಸೂಚಿಸಿದಾಗ ಅದರಲ್ಲಿ ನಗದು ಇದ್ದದ್ದು ಗೊತ್ತಾಯಿತು. ನ್ಯಾಯಾಧೀಶರು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದು, ಅವರು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೋಲಂಕಿಯನ್ನು ಕಸ್ಟಡಿಗೆ ತೆಗೆದುಕೊಂಡರು.