ಹ್ಯಾರಿ ಪಾಟರ್ ಹೆಸರಿನ ಈ ವ್ಯಕ್ತಿ, ಮೊದಲ ಅವತರಣಿಕೆಯ ಹ್ಯಾರಿ ಪಾಟರ್ ಹಾಗೂ ಫಿಲಾಸಫರ್ಸ್ ಸ್ಟೋನ್ ಪುಸ್ತಕಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನ ವಾಟರ್‌ಲೂವಿಲ್ಲೆಯ ಪಾಟರ್ ಎಂಟು ವರ್ಷದ ಬಾಲಕನಿದ್ದಾಗ ಆತನ ತಂದೆಯಿಂದ ಈ ಪುಸ್ತಕ ಪಡೆದಿದ್ದರು. ಈಗ 33 ವರ್ಷ ವಯಸ್ಸಿನವರಾಗಿರುವ ಹ್ಯಾರಿ ಈ ಅಪರೂಪದ ಪ್ರತಿಯನ್ನು ಮಾರಿ ಆಫ್ರಿಕಾದಲ್ಲಿ ತನ್ನ ಚಿತಾಭಸ್ಮ ವಿಸರ್ಜನೆಯಾಗಬೇಕೆಂಬ ತಂದೆಯ ಆಸೆಯನ್ನು ಈಡೇರಿಸಲು ದುಡ್ಡು ಸಂಗ್ರಹಿಸುತ್ತಿದ್ದಾರೆ.
ಹ್ಯಾರಿ ಪಾಟರ್ ಮತ್ತು ಫಿಲಾಸಫರ್ಸ್ ಸ್ಟೋನ್‌ನ ಮೊದಲ ಆವೃತ್ತಿಯ 500 ಪ್ರತಿಗಳಲ್ಲಿ ಈ ಪುಸ್ತಕವೂ ಒಂದಾಗಿದೆ. ಅಂಗಡಿಗಳಿಗೆ 200 ಪ್ರತಿಗಳನ್ನು ಮಾತ್ರವೇ ಕಳುಹಿಸಿದ್ದರೆ ಮಿಕ್ಕವನ್ನು ಗ್ರಂಥಾಲಯಗಳು ಹಾಗೂ ಶಾಲೆಗಳಿಗೆ ಕಳುಹಿಸಲಾಗಿತ್ತು.
ಜನಪ್ರಿಯ ಕಾಮಿಕ್ ಪಾತ್ರದ ಹೆಸರನ್ನೇ ತಾನು ನಿಜವಾದ ಹೆಸರನ್ನಾಗಿ ಇಟ್ಟುಕೊಂಡಿರುವುದನ್ನು ಜನರಿಗೆ ನಂಬಿಸಲು ಈ ಹ್ಯಾರಿಗೆ ಎರಡು ದಶಕಗಳು ಕಳೆದಿವೆಯಂತೆ. ಅಕ್ಟೋಬರ್ 7ರಂದು ಈ ಪುಸ್ತಕದ ಅವತರಣಿಕೆಯನ್ನು ಹಾನ್ಸನ್ಸ್ ಹರಾಜುದಾರರು ಡರ್ಬಿಶೈರ್‌ನ ಎಟ್ವಾಲ್‌ನಲ್ಲಿ ಹರಾಜಿಗೆ ಇಡಲಿದ್ದಾರೆ. ಬೆಲೆಯನ್ನು ಬರೋಬ್ಬರಿ 30 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.