ಮದುವೆಯಾಗಬಯಸುವವರು ಸಮಾನ ಮನಸ್ಕರ ಹುಡುಕಾಟದಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿ ಪರಿಚಯವಾದರೆ ಅವರೊಂದಿಗೆ ಮಾತುಕತೆ ನಡೆಸಿ ಅಭಿರುಚಿ, ಆಸಕ್ತಿಗಳನ್ನು ಅರಿತು ಸೂಕ್ತವೆನಿಸಿದರೆ ಮದುವೆಯವರೆಗೂ ಮುಂದುವರೆಯುತ್ತಾರೆ. ಆದರೆ ಗುಜರಾತಿನ ವ್ಯಕ್ತಿಯೊಬ್ಬನಿಗೆ ಇಂತಹ ಮದುವೆ ದುಬಾರಿಯಾಗಿ ಪರಿಣಮಿಸಿದೆ.
ಹೌದು, ಗುಜರಾತಿನ ಪೋರಬಂದರ್ ನಿವಾಸಿ ವಿಮಲ್ ಕಾರಿಯಾ ಎಂಬಾತ ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ರೀಟಾ ದಾಸ್ ಎಂಬಾಕೆಯನ್ನು ಮದುವೆಯಾಗಿದ್ದು ಆರು ತಿಂಗಳ ಬಳಿಕ ಆಕೆಯ ಹಿನ್ನೆಲೆ ತಿಳಿದು ಬೆಚ್ಚಿಬಿದ್ದಿದ್ದಾನೆ. ಆಕೆಯ ವಿರುದ್ಧ ಅಸ್ಸಾಂನಲ್ಲಿ ದರೋಡೆ, ವಂಚನೆ, ಕೊಲೆ ಪ್ರಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿರುವುದು ಈಗ ಬೆಳಕಿಗೆ ಬಂದಿದೆ. ಅಲ್ಲದೇ ಆಕೆ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವುದೂ ಗೊತ್ತಾಗಿದೆ.
ವಿಮಲ್ ಹಾಗೂ ರೀಟಾ ದಾಸ್ ದಾಂಪತ್ಯ ಆರು ತಿಂಗಳವರೆಗೆ ಸುಗಮವಾಗಿಯೇ ನಡೆದಿತ್ತು. ತನಗೆ ಈಗಾಗಲೇ ಒಂದು ಮದುವೆಯಾಗಿದ್ದು ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ಆಕೆ ಮದುವೆಗೂ ಮುನ್ನವೇ ತಿಳಿಸಿದ್ದಳು. ಮದುವೆಯಾದ ಆರು ತಿಂಗಳ ಬಳಿಕ ತನಗೆ ಅರ್ಜೆಂಟ್ ಫೋನ್ ಕರೆ ಬಂದಿದೆ. ಹಾಗಾಗಿ ಅಸ್ಸಾಂ ಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾಳೆ.
ಅಲ್ಲದೆ ಕುಟುಂಬದ ಭೂ ವಿವಾದ ಪರಿಹರಿಸಬೇಕಾಗಿದೆ ಎಂದು ಆಕೆ ತಿಳಿಸಿದ್ದು, ಇದ್ದರೂ ಇರಬಹುದು ಎಂದು ಭಾವಿಸಿದ ವಿಮಲ್, ಅಸ್ಸಾಂಗೆ ಹೋಗಲು ಅನುಮತಿ ನೀಡಿದ್ದಾನೆ. ಇದಾದ ಸ್ವಲ್ಪ ದಿನ ಬಳಿಕ ವಕೀಲರೊಬ್ಬರಿಂದ ಫೋನ್ ಬಂದಿದ್ದು, ನಿಮ್ಮ ಪತ್ನಿ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ ಜಾಮೀನು ಪಡೆಯಲು ಒಂದು ಲಕ್ಷ ರೂ. ಕಳುಹಿಸಿ ಎಂದು ಕೇಳಿದ್ದಾರೆ.
ಆಗ ಅನುಮಾನಗೊಂಡು ವಿಮಲ್ ವಿಚಾರಿಸಿದಾಗ ತನ್ನ ಪತ್ನಿಯ ಅಸಲಿ ಹೆಸರು ರೀಟಾ ದಾಸ್ ಅಲ್ಲ ರೀಟಾ ಚೌಹಾನ್ ಎಂಬುದು ತಿಳಿದು ಬಂದಿದೆ. ಅಲ್ಲದೆ ಆಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಇರುವುದು ಸಹ ಗೊತ್ತಾಗಿದೆ. ಆಕೆಯ ಮೊದಲ ಪತಿ, ಜೈಲಿನಲ್ಲಿದ್ದು ಆತನ ಮೇಲೆ ಸಾವಿರಾರು ಕಾರುಗಳನ್ನು ಕಳ್ಳತನ ಮಾಡಿರುವ ಪ್ರಕರಣ ಇರುವುದು ಬಹಿರಂಗವಾಗಿದೆ. ರೀಟಾ ಸಹ ಆತನ ಜೊತೆ ಸೇರಿದ್ದ ಕಾರಣ ಆಕೆಯ ವಿರುದ್ಧವೂ ಹಲವು ಪ್ರಕರಣಗಳು ದಾಖಲಾಗಿದ್ದವು. ಇದೀಗ ವಂಚನೆಗೊಳಗಾಗಿರುವ ವಿಮಲ್ ವಿಚ್ಛೇದನ ಪಡೆಯಲು ಮುಂದಾಗಿದ್ದಾನೆ.