ದೆಹಲಿ: ರೈಲಿನಲ್ಲಿ ಬಾಂಬ್ ಇರುವ ಕುರಿತು ಪೊಲೀಸರಿಗೆ ಕರೆ ಬಂದ ನಂತರ ಮಂಗಳವಾರ ರಾತ್ರಿ ನವದೆಹಲಿ-ಕರ್ನಾಟಕ ಎಕ್ಸ್ ಪ್ರೆಸ್ ರೈಲು 25 ನಿಮಿಷಗಳ ಕಾಲ ನಿಂತಿರೋ ಘಟನೆ ನಡೆದಿದೆ.
ಆಗ್ರಾದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ನಂತರ ರೈಲ್ವೇ ಸಂರಕ್ಷಣಾ ಪಡೆ ಜಿಆರ್ಪಿಗೆ ಎಚ್ಚರಿಕೆ ನೀಡಿದೆ. ಕೂಡಲೇ ರೈಲಿನಲ್ಲಿದ್ದ ಪ್ರಯಾಣಿಕರ ತಪಾಸಣೆ ನಡೆಸಲಾಯಿತು.
ಮಲಗಿದ್ದ ಪ್ರಯಾಣಿಕರನ್ನು ಎಬ್ಬಿಸಿದ ಪೊಲೀಸರು ರೈಲಿನ ಪ್ರತಿಯೊಂದು ಬೋಗಿಯನ್ನು ಪರಿಶೀಲಿಸಿದ್ದಾರೆ. ದೆಹಲಿ-ಕರ್ನಾಟಕ ಎಕ್ಸ್ಪ್ರೆಸ್ ರೈಲನ್ನು ಮಥುರಾ ಜಂಕ್ಷನ್ನಲ್ಲಿ 25 ನಿಮಿಷಗಳ ಕಾಲ ನಿಲ್ಲಿಸಿ ಕೂಲಂಕಷವಾಗಿ ಪರಿಶೀಲಿಸಲಾಯಿತು. ಅನುಮಾನಾಸ್ಪದವಾಗಿ ಕಂಡುಬರದೇ ಇದ್ದುದರಿಂದ ಮತ್ತೆ ರೈಲು ಹೊರಡಲು ಅನುವು ಮಾಡಿಕೊಡಲಾಯಿತು.
ಆದರೆ, ಇದು ಹುಸಿ ಬಾಂಬ್ ಕರೆ ಆಗಿದ್ದು, ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ..! ಯಾಕೆಂದ್ರೆ ಆರೋಪಿ ಸತ್ಯಾನಂದ್ ಅಡುಗೆ ಸಿಬ್ಬಂದಿಯ ವರ್ತನೆಯಿಂದ ಅಸಮಾಧಾನಗೊಂಡಿದ್ದರಿಂದ ರೈಲ್ವೆ ಸಹಾಯವಾಣಿ 139 ಗೆ ಹುಸಿ ಬಾಂಬ್ ಕರೆ ಮಾಡಿದ್ದಾನೆ. ದೆಹಲಿಯ ಅರುಣಾ ಅಸಫ್ ಅಲಿ ರಸ್ತೆಯಲ್ಲಿರುವ ಆಶ್ರಯ ಮನೆಯಿಂದ ಆತನನ್ನು ಬಂಧಿಸಲಾಗಿದೆ.