ಫಾಂಟಾ ಆಮ್ಲೆಟ್‌ನಿಂದ ಓರಿಯೊ ಮ್ಯಾಗಿಯವರೆಗೆ, ವಿಶಿಷ್ಠ ಮತ್ತು ವಿಲಕ್ಷಣ ಆಹಾರ ಶೈಲಿಗಳನ್ನು ತಯಾರಕರು ವಿಭಿನ್ನವಾಗಿ ತಯಾರಿಸಲು ಮುಂದಾಗಿರುವುದು ನಿಮಗೆ ಗೊತ್ತೇ ಇದೆ. ಇದಲ್ಲದೆ, ಈಗ ಮತ್ತೊಂದು ಹೊಸ ಶೈಲಿಯ ಖಾದ್ಯ ತಯಾರಿಸಿರುವ ವಿಡಿಯೋವೊಂದು ಆನ್ಲೈನ್ ನಲ್ಲಿ ವೈರಲ್ ಆಗಿದೆ.
ನಾಗ್ಪುರದ ವಿವೇಕ್ ಮತ್ತು ಆಯೇಶಾ ಎಂಬ ಆಹಾರ ಬ್ಲಾಗರ್‌ಗಳು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ನೀವು ಬಿಳಿ ಬಣ್ಣದ ಇಡ್ಲಿಗಳನ್ನು ತಿಂದಿರಬಹುದು. ಆದರೆ, ಇಲ್ಲಿ ಕಪ್ಪು ಬಣ್ಣದ ಇಡ್ಲಿಗಳನ್ನು ತಯಾರಿಸಲಾಗುತ್ತಿದೆ.
ವ್ಯಕ್ತಿಯೊಬ್ಬ ಬೂದು-ಕಪ್ಪು ಇಡ್ಲಿ ಹಿಟ್ಟನ್ನು ಸ್ಟೀಮರ್ ಪ್ಲೇಟ್ ಗೆ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು. ಇಡ್ಲಿ ಬೆಂದ ನಂತರ ಅದನ್ನು ತಟ್ಟೆಗೆ ಹಾಕಿ ಅದರ ಮೇಲೆ ಪೋಡಿ ಪುಡಿಯನ್ನು ಉದುರಿಸಿದ್ದಾರೆ. ನಂತರ ಸ್ವಲ್ಪ ತುಪ್ಪವನ್ನೂ ಸುರಿದು, ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿದ್ದಾರೆ.
ನಾಗ್ಪುರದ ವಾಕರ್ಸ್ ಸ್ಟ್ರೀಟ್‌ನಲ್ಲಿರುವ ಆಲ್ ಅಬೌಟ್ ಇಡ್ಲಿ ಎಂಬ ಸ್ಥಳದಲ್ಲಿ ಈ ಕಪ್ಪು ಇಡ್ಲಿಗಳು ಲಭ್ಯವಿವೆ. ಕಪ್ಪು ಇಡ್ಲಿ, ಇದು ಡಿಟಾಕ್ಸ್ ಇಡ್ಲಿಯಾಗಿದ್ದು ಗರ್ಭಿಣಿಯರಿಗೆ ಒಳ್ಳೆಯದಲ್ಲ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಕ್ಲಿಪ್ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಆದರೆ, ನೆಟ್ಟಿಗರು ಇದನ್ನು ಇಷ್ಟಪಟ್ಟಂತೆ ಕಂಡುಬಂದಿಲ್ಲ. ಲೋಹದ ಪೊದೆಯಂತೆ ಕಾಣುತ್ತಿದೆ ಅಂತೆಲ್ಲಾ ಋಣಾತ್ಮಕ ಕಾಮೆಂಟ್ ಗಳನ್ನು ನೆಟ್ಟಿಗರು ಮಾಡಿದ್ದಾರೆ.