ಕೆಲವು ಸಮಯ ಜೊತೆಗಿದ್ದು ನಂತರ ಅದರ ಬಗ್ಗೆ ಏನೊಂದೂ ಗೊತ್ತಿಲ್ಲದೆ ಮರೆತು ಹೋಗುವ ರೋಗದ ಬಗ್ಗೆ ಸಿನಿಮಾಗಳಲ್ಲಿ ನೋಡಿರುತ್ತೀರಾ.. ನೆನಪಿದ್ದಾಗ ತಾವು ಬರೆದಿಟ್ಟಿದ್ದರೆ ಆ ವಿಷಯ ಜ್ಞಾಪಕಕ್ಕೆ ಬರಬಹುದು. ನಿಜ ಜೀವನದಲ್ಲೂ ಈ ರೀತಿಯ ಮರೆವಿನಿಂದ ಅನೇಕ ಮಂದಿ ಬಳಲುತ್ತಿದ್ದಾರೆ.
ಆರು ವರ್ಷಗಳ ಹಿಂದೆ ಭೀಕರ ಕಾರು ಅಪಘಾತಕ್ಕೀಡಾದ ವ್ಯಕ್ತಿಯೊಬ್ಬನ ಮೆದುಳು ಎಷ್ಟು ಕೆಟ್ಟದಾಗಿ ಹಾನಿಗೊಳಗಾಗಿದೆ ಎಂದರೆ ಆತನಿಗೆ ಆರು ಗಂಟೆಗಳ ನೆನಪು ಮಾತ್ರ ಉಳಿದಿರುತ್ತದೆ. ನಂತರ ಮರೆತು ಹೋಗುತ್ತದೆ. ಡೇನಿಯಲ್ ಸ್ಮಿತ್ ಅವರು ತಮ್ಮ ಹಳೆಯ ಜೀವನಕ್ಕೆ ಮರಳಲು ಸಾಕಷ್ಟು ಚಿಕಿತ್ಸೆಗೆ ಒಳಗಾದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಡೇನಿಯಲ್ ಕೇವಲ ಆರು ಗಂಟೆಗಳ ಕಾಲ ವಿಷಯಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರು ಭೇಟಿ ನೀಡಿದ ಸ್ಥಳಗಳು ಮತ್ತು ಅವರು ಭೇಟಿಯಾದ ಜನರ ಟಿಪ್ಪಣಿಗಳನ್ನು ಮಾಡದಿದ್ದರೆ, ಅವರು ಸಂಪೂರ್ಣವಾಗಿ ಅವರ ನೆನಪಿನಿಂದ ಮರೆಯಾಗುತ್ತಾರೆ.
ಈ ಸ್ಥಿತಿಯು ಅವನ ಸಂಬಂಧಗಳ ಮೇಲೆ ಕೂಡ ಪರಿಣಾಮ ಬೀರಿದೆ. ಇದರಿಂದಾಗಿ ಡೇನಿಯಲ್ ತನ್ನ ಆಗಿನ ಗೆಳತಿಯೊಂದಿಗೆ ಬೇರ್ಪಡಬೇಕಾಯ್ತು. ಮತ್ತು ಅವನ ಸ್ನೇಹಿತರನ್ನು ಕೂಡ ನೆನಪಿಸಿಕೊಳ್ಳದ ಕಾರಣ ಬೇರೆಯಾಗಿ ಇರಬೇಕಾಯ್ತು. ಡೇನಿಯಲ್ ಜನರೊಂದಿಗೆ ಕಳೆದ ಸಮಯದ ನೆನಪುಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.
ಕೆಲವು ವರ್ಷಗಳ ಹಿಂದೆ, ಡೇನಿಯಲ್ ಮತ್ತು ಅವರ ಮಾಜಿ ಸಂಗಾತಿ ಕ್ಯಾಥರೀನಾಗೆ ಗಂಡು ಮಗು ಜನಿಸಿದಾಗ, ಸವಾಲುಗಳು ಹೆಚ್ಚಾದವು. ತನ್ನ ಮಗ ಬೆಳೆಯುತ್ತಿರುವ ಬಗ್ಗೆ, ಅವನ ಜನ್ಮದಿನದ ಬಗ್ಗೆಯೂ ಡೇನಿಯಲ್ ಗೆ ನೆನಪಿಲ್ಲ. ಇದು ನಿಜವಾಗಿಯೂ ಅತ್ಯಂತ ಭಯಾನಕವಾಗಿದೆ ಅಂತಾ ಅವರು ಬೇಸರ ವ್ಯಕ್ತಪಡಿಸುತ್ತಾರೆ.
ತನ್ನ ಅಲ್ಪಾವಧಿಯ ಸ್ಮರಣೆಯ ಹೊರತಾಗಿಯೂ, ಡೇನಿಯಲ್ ಇದೇ ರೀತಿಯ ಸ್ಥಿತಿಯಲ್ಲಿರುವ ಜನರಿಗೆ ಸಹಾಯ ಮಾಡಲು ತನ್ನ ಜೀವನವನ್ನು ಮುಡಿಪಾಗಿಟ್ಟಿರುವುದು ನಿಜಕ್ಕೂ ಪ್ರಶಂಸನೀಯ.