
ಮುಂಬೈ: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ ವಾಡ್ ನಲ್ಲಿ ತನ್ನ 28 ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 30 ವರ್ಷದ ನೇಪಾಳಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ದುಷ್ಕರ್ಮಿ ಪತ್ನಿಯ ಶೀಲ ಶಂಕಿಸಿ ಖಾಸಗಿ ಭಾಗಗಳನ್ನು ಹರಿತವಾದ ಬ್ಲೇಡ್‌ನಿಂದ ಚುಚ್ಚಿ, ಎರಡು ಕಬ್ಬಿಣದ ಮೊಳೆಗಳನ್ನು ಸೇರಿಸಿದ್ದಲ್ಲದೇ, ಹಿತ್ತಾಳೆಯ ಬೀಗ ಹಾಕಿದ್ದಾನೆ.
ಮೇ 11 ರಂದು ಈ ಘಟನೆ ನಡೆದಿದೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ವ್ಯಕ್ತಿ ಆಕೆಗೆ ಥಳಿಸಿ ಆಕೆಯ ಕೈಕಾಲುಗಳನ್ನು ಕಟ್ಟಿ, ನಂತರ ಹರಿತವಾದ ಬ್ಲೇಡ್‌ನಿಂದ ಆಕೆಯ ಖಾಸಗಿ ಭಾಗಕ್ಕೆ ಎರಡು ರಂಧ್ರಗಳನ್ನು ಮಾಡಿ ಕಬ್ಬಿಣದ ಮೊಳೆಗಳನ್ನು ಸೇರಿಸಿ ಬೀಗ ಹಾಕಿದ್ದಾನೆ.
ಪತಿ ಕ್ರೂರವಾಗಿ ಹಲ್ಲೆ ಮುಂದುವರೆಸಿದಾಗ, ಮಹಿಳೆ ನೋವಿನಿಂದ ನರಳಿ ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ಕಿರುಚಾಟ ಕೇಳಿದ ವ್ಯಕ್ತಿಯೊಬ್ಬರು ಸ್ಥಳೀಯರ ನೆರವಿನಿಂದ ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಮಹಿಳೆ ಗೃಹಿಣಿಯಾಗಿದ್ದಾರೆ. ಆರೋಪಿ ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.