ಬಹುತೇಕರು ಲಾಟರಿ ಜಾಕ್ ಪಾಟ್ ಗೆದ್ದರೆ ಆ ಹಣವನ್ನು ಸ್ವಂತಕ್ಕೆ ವಿನಿಯೋಗಿಸಲು ಯೋಚಿಸುತ್ತಾರೆ. ಅಮೆರಿಕದ ನ್ಯೂ ಬರ್ನ್ ನಿವಾಸಿ ಮತ್ತು ಆಫ್ರಿಕಾದ ಮಾಲಿ ಮೂಲದ ಸೌಲೆಮನೆ ಸನಾ ಅವರಿಗೆ ಡಾಲರ್ 100,000 (ಸುಮಾರು ರೂ. 82,81,000) ಹಣವನ್ನು ಲಾಟರಿಯಲ್ಲಿ ಗೆದ್ದಿದ್ದಾರೆ. ಇದನ್ನು ತನ್ನ ತವರೂರಿನ ಶಾಲಾ ಮಕ್ಕಳಿಗೆ ಸಹಾಯ ಮಾಡಲು ವಿನಿಯೋಗಿಸುವುದಾಗಿ ಅವರು ಹೇಳಿದ್ದಾರೆ.
ಯುದ್ಧದಿಂದ ಹಾನಿಗೊಳಗಾದ ಮಾಲಿಯಲ್ಲಿ ಮಕ್ಕಳಿಗೆ ಹೆಚ್ಚಿನ ಶಾಲಾ ತರಗತಿ ಕೊಠಡಿಗಳನ್ನು ನಿರ್ಮಿಸಲು ಸಹಾಯ ಮಾಡಲು ನಾನು ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ. ಅದು ನನಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಸನಾ ಅವರು ತಮ್ಮ ದೇಶದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಲಾಭರಹಿತ ಸಂಸ್ಥೆಯನ್ನು ಪ್ರಾರಂಭಿಸಿದ್ದಾರಂತೆ.
ಲಾಟರಿಯಲ್ಲಿ ಜಾಕ್ ಪಾಟ್ ಗೆದ್ದ ನಂತರ ಸಂತಸ ಹಂಚಿಕೊಂಡ ಅವರು, ಇದು ನನ್ನ ಕನಸಾಗಿತ್ತು. ನಾನು ಆ ಸ್ಕ್ರ್ಯಾಚ್ ಟಿಕೆಟ್ ಖರೀದಿಸಲು ಇದು ಕೂಡ ಒಂದು ಪ್ರಮುಖ ಕಾರಣವಾಗಿತ್ತು. ತನ್ನ ತವರೂರಿನ ಮಕ್ಕಳಿಗೆ ಸಹಾಯ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂದು ಸನಾ ಹೇಳಿದರು.
ನನಗೆ ಡ್ಯಾನ್ಸ್ ಮಾಡುವುದು ಎಂದರೆ ಬಹಳ ಇಷ್ಟ. ಜೊತೆಗೆ ಮಾಲಿಯಲ್ಲಿರುವ ಮಕ್ಕಳಿಗೂ ಅದನ್ನು ಕಲಿಸಲು ಬಯಸುತ್ತೇನೆ. ಹೀಗಾಗಿ ಕೊಂಚ ಹಣವನ್ನು ಅಲ್ಲಿ ನೃತ್ಯ ಕೇಂದ್ರವನ್ನು ನಿರ್ಮಿಸಲು ಬಳಸಲಾಗುವುದು ಎಂದು ಹೇಳಿದ್ರು.