ನಾಗ್ಪುರದ ಖಾಸಗಿ ಬ್ಯಾಂಕ್ಗೆ ವ್ಯಕ್ತಿಯೊಬ್ಬ ‘ಗನ್’ ಹಿಡಿದು ಪ್ರವೇಶಿಸಿದ ನಂತರ ಕೋಲಾಹಲ ಉಂಟಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಬುಧವಾರ ಸಂಜೆ ನಾಗ್ಪುರದ ರಾಮದಾಸ್ಪೇತ್ ಪ್ರದೇಶದಲ್ಲಿನ ಪ್ರಮುಖ ಖಾಸಗಿ ಬ್ಯಾಂಕ್ನ ಶಾಖೆಗೆ ‘ಗನ್’ ಸಮೇತ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದರೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ತನಿಖೆ ವೇಳೆ ಅದು ಆಟಿಕೆ ಗನ್ ಎಂದು ಪತ್ತೆಯಾಗಿದೆ.
40 ವರ್ಷದ ವ್ಯಕ್ತಿ ಆ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಸೋಮವಾರ ಬ್ಯಾಂಕ್ಗೆ ಬಂದಿದ್ದ ಅವರು, ತಮ್ಮ ಖಾತೆಯಿಂದ ಯಾರೋ ವಂಚನೆಯಿಂದ ಹಣ ಪಡೆದಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಅವರ ಖಾತೆಯಿಂದ 83,000 ರೂ. ಕಡಿತವಾಗಿದೆ ಎಂಬ SMS ಎಚ್ಚರಿಕೆ ಬಂದಿದೆ ಎಂದು ಅವರು ಹೇಳಿದರು. ತನಿಖೆ ನಡೆಸಿದ ಬ್ಯಾಂಕ್ ಅಧಿಕಾರಿಗಳು, ಆ ಮೊತ್ತವನ್ನು ಆತನೇ ತನ್ನ ಡಿಮ್ಯಾಟ್ ಖಾತೆಗೆ ವರ್ಗಾಯಿಸಿರುವುದಾಗಿ ವ್ಯಕ್ತಿಗೆ ತಿಳಿಸಿದ್ದಾರೆ.
BIG NEWS: ಹಿಜಾಬ್ ವಿವಾದ; ಕಣ್ಣೀರಿಟ್ಟ ಗ್ರಂಥಪಾಲಕಿ; ಕಾಲೇಜು ಆವರಣದಲ್ಲಿ ಹೈಡ್ರಾಮಾ
ಇದಾದ ಬಳಿಕ ಬುಧವಾರ ಸಂಜೆ ಆ ವ್ಯಕ್ತಿ ಆಟಿಕೆ ಗನ್ ಹಿಡಿದು ಬ್ಯಾಂಕ್ಗೆ ಬಂದಿದ್ದಾನೆ. ಭದ್ರತಾ ಸಿಬ್ಬಂದಿ ಅವರನ್ನು ಗೇಟ್ ಬಳಿ ನಿಲ್ಲಿಸಿದಾಗ, ಅವನು ತನ್ನನ್ನು ತಾನು ಸೇನಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಸಿಬ್ಬಂದಿ ಅವರನ್ನು ಕೊಠಡಿಯಲ್ಲಿ ಕುಳಿತುಕೊಳ್ಳಲು ಹೇಳಿ, ಆತನ ಬಳಿ ಗನ್ ಇರುವುದನ್ನ ಸಹಾಯಕ ಬ್ಯಾಂಕ್ ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ. ನಂತರ ಕೊಠಡಿಯೊಳಗೆ ಕುಳಿತಿದ್ದ ವ್ಯಕ್ತಿಯೊಂದಿಗೆ ಮ್ಯಾನೇಜರ್ ಮಾತನಾಡಿದ್ದಾರೆ.
ಅಷ್ಟರಲ್ಲಿ ಉಳಿದ ಬ್ಯಾಂಕ್ ಅಧಿಕಾರಿಗಳಲ್ಲಿ ಒಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸೀತಾಬುಲ್ಡಿ ಮತ್ತು ಬಜಾಜ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನ ವಶಕ್ಕೆ ಪಡೆದರು ಎಂದು ಬಜಾಜ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಶುಭಾಂಗಿ ದೇಶಮುಖ್ ತಿಳಿಸಿದ್ದಾರೆ. ವಿಚಾರಣೆ ವೇಳೆ ಆ ವ್ಯಕ್ತಿ ಅವಿವಾಹಿತನಾಗಿದ್ದು, ನಗರದ ದತ್ತವಾಡಿ ಪ್ರದೇಶದಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲಾ ಆತ ತನ್ನನ್ನು ತಾನು ಭಾರತೀಯ ವಾಯುಸೇನೆಯಲ್ಲಿ ಪ್ಯಾರಾ ಕಮಾಂಡೋ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಗುರುತಿನ ಚೀಟಿ ತೋರಿಸಲು ವಿಫಲನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿಯ ತಾಯಿ ಪೊಲೀಸರಿಗೆ ಆತ ಸ್ಕಿಜೋಫ್ರೇನಿಯಾದ ರೋಗಿಯಾಗಿದ್ದಾನೆ ಎಂದು ಹೇಳಿದ್ದಾರೆ (ಸ್ಕಿಜೋಫ್ರೇನಿಯಾ ಗಂಭೀರ ಮಾನಸಿಕ ಅಸ್ವಸ್ಥತೆಯಾಗಿದ್ದು, ಆ ರೋಗದಿಂದ ಬಳಲುವವರಿಗೆ ವಾಸ್ತವ ಹಾಗೂ ಕಲ್ಪನೆಯ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ). ಈ ವಿಷಯ ತಿಳಿದ ನಂತರ, ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಅಥವಾ ಬೇಡವೇ ಎಂದು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.