ಮೀರತ್: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುವ ರಾಜ್ಯಸಭಾ ಸಂಸದನಂತೆ ನಟಿಸಿ 1 ಕೋಟಿ ರೂ. ಮೊತ್ತದ ಪರಿಹಾರ ಪಡೆಯಲು ಮುಂದಾಗಿರುವಂಥ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಎರಡು ಬಾರಿ ಜನತಾ ಪಕ್ಷದ ರಾಜ್ಯಸಭಾ ಸಂಸದರಾಗಿದ್ದ ಪ್ರೇಮ್ ಮನೋಹರ್ ಅವರಂತೆ ನಟಿಸಿದವನೊಬ್ಬ, ವ್ಯಕ್ತಿಯೊಬ್ಬರು ರಸ್ತೆ ವಿಸ್ತರಣೆ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ 80 ಬಿಘಾ ಭೂಮಿಗೆ 1 ಕೋಟಿ ರೂ. ಪರಿಹಾರವನ್ನು ಪಡೆಯಲು ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಮನೋಹರ್ ಅವರ ಆಧಾರ್ ಕಾರ್ಡ್, ವೋಟರ್ ಐಡಿ, ವಿಳಾಸ ಪುರಾವೆ ಸೇರಿದಂತೆ ಎಲ್ಲಾ ನೈಜ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುಪಾವತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ನಿಜವಾದ ಪ್ರೇಮ್ ಮನೋಹರ್ ಎರಡು ಬಾರಿ ಸಂಸದರಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದಲ್ಲದೆ, ಅವರು 2013 ರಲ್ಲಿ ಕೊನೆಯುಸಿರೆಳೆದಿದ್ದಾರೆ. ಮನೋಹರ್ ಅವರ ನಿಧನದ ಬಗ್ಗೆ ಅವರ ಮಗ ಪ್ರಶಾಂತ್ ಕುಮಾರ್ ಅವರು ನಂತರ ದೃಢಪಡಿಸಿದ್ದಾರೆ.
ವಿಷಯ ಬಹಿರಂಗವಾಗುತ್ತಿದ್ದಂತೆ, ಜಿಲ್ಲಾ ಮ್ಯಾಜಿಸ್ಟ್ರೇಟ್ , ಈ ವಿಷಯದ ಬಗ್ಗೆ ಕಟ್ಟುನಿಟ್ಟಾದ ತನಿಖೆಗೆ ಆದೇಶಿಸಿದ್ದು, 1 ಕೋಟಿ ರೂ. ಪರಿಹಾರದ ಮೊತ್ತವನ್ನು ತೆರವುಗೊಳಿಸಿದೆ. ಅಲ್ಲದೆ ಮೋಸಗಾರ ವ್ಯಕ್ತಿಯನ್ನು ಪತ್ತೆ ಹಚ್ಚಲು ತಂಡವನ್ನು ನಿಯೋಜಿಸಲಾಗಿದೆ.