ಮಧ್ಯಪ್ರದೇಶದ ಸಾಗರ್‌ನಲ್ಲಿ ಓರ್ವ ವ್ಯಕ್ತಿಯನ್ನ ಬಂಧನದಲ್ಲಿಟ್ಟು ಮೂತ್ರ ಕುಡಿಯಲು ಒತ್ತಾಯಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ಪರ ಕಾಂಗ್ರೆಸ್ ಹೋರಾಟ ಮಾಡಲು ಮುಂದಾಗಿತ್ತು. ಆದರೆ ಆರೋಪದ ಅಸಲಿ ಬಣ್ಣ ಬಯಲಾಗ್ತಿದ್ದಂತೆ ಕಾಂಗ್ರೆಸ್ ಪ್ರತಿಭಟನೆಯಿಂದ ಹಿಂದೆ ಸರಿದ ವಿಷಯ ಬಹಿರಂಗವಾಗಿದೆ.
ಗಿರಣಿ ಮಾಲೀಕ ತನಗೆ ಮೂತ್ರ ಕುಡಿಯಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದ ರಂಜಿತ್ ಲೋಧಿ ಪೊಲೀಸರು ತನ್ನ ದೂರನ್ನು ತೆಗೆದುಕೊಳ್ಳದೇ ನಿರ್ಲಕ್ಷಿಸಿದ್ದಾರೆಂದಿದ್ದರು. ಆಗ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದ ಆತ ಬೆಂಬಲ ಕೋರಿದ್ದ. ಲೋಧಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ಯೋಜಿಸಿತ್ತು ಆದರೆ ಕಳ್ಳತನದ ಆರೋಪದ ಮೇಲೆ ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆದ ನಂತರ ಅದನ್ನು ರದ್ದುಗೊಳಿಸಿತು.
ಮೂರು ದಿನಗಳ ಕಾಲ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಈ ವೇಳೆ ಗಿರಣಿ ಮಾಲೀಕ ಮಹೇಶ್ ಸಾಹು ಬಲವಂತವಾಗಿ ಮೂತ್ರ ಕುಡಿಸಿದ್ದಾನೆ ಎಂದು ರಂಜಿತ್ ಲೋಧಿ ಆರೋಪಿಸಿದ್ದರು. ಕಳೆದ ತಿಂಗಳು ನಡೆದ ಘಟನೆಯ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಲೋಧಿ ಹೇಳಿದ್ದರು.
ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಗಿರಣಿ ಮಾಲೀಕರು ಹಿರಿಯ ಸಚಿವರನ್ನು ಸಂಪರ್ಕಿಸಿದ ಪರಿಣಾಮ ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ರಂಜಿತ್ ಲೋಧಿ ಆರೋಪಿಸಿದ್ದರು.
ಲೋಧಿ ಸಹಾಯಕ್ಕಾಗಿ ಭೋಪಾಲ್‌ನ ಕಾಂಗ್ರೆಸ್ ನಾಯಕರು ಆರಂಭದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಯೋಜಿಸಿದ್ದರು.
ಆದರೆ ಗೋಷ್ಠಿಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಮನೋಜ್ ಅಹಿರ್ವಾರ್ ಎಂದು ಗುರುತಿಸಲಾದ ಯುವಕನನ್ನು 15 ಕೆಜಿ ಬೇಳೆಕಾಳುಗಳನ್ನು ಕದ್ದಿದ್ದಕ್ಕಾಗಿ ಅಮಾನುಷವಾಗಿ ಥಳಿಸಲಾಗಿತ್ತು. ದಾಳಿಕೋರರಲ್ಲಿ ರಂಜಿತ್ ಲೋಧಿ ಕೂಡ ಇದ್ದರು.
ದಾಳಿಯಲ್ಲಿ ರಂಜಿತ್ ಲೋಧಿ ಶಾಮೀಲಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸದಿರಲು ನಿರ್ಧರಿಸಿದರು.
ವೀಡಿಯೊ ವೈರಲ್ ಆದ ನಂತರ ಪೊಲೀಸರು ಹಲ್ಲೆಯಲ್ಲಿ ಭಾಗಿಯಾಗಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸೋಮವಾರ ಮನೋಜ್ ಅಹಿರ್ವಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದಾಳಿಕೋರರನ್ನು ಗುರುತಿಸಿದ್ದಾರೆ ಎಂದು ಸಾಗರ್ ಪೊಲೀಸರು ತಿಳಿಸಿದ್ದಾರೆ. ತನ್ನ ಹಲ್ಲೆಯ ವಿಡಿಯೋವನ್ನು 2022 ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.