ಈ ಕಾಲದಲ್ಲಿ ಯಾರು ಸುರಕ್ಷಿತವಾಗಿಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ, ಎಂಟು ವರ್ಷದ ಬಾಲಕನನ್ನು ಅಪಹರಿಸಿ, ಅತ್ಯಾಚಾರ ಎಸಗಲು ಪ್ರಯತ್ನಿಸಿ, ಕೊಂದಿರುವ ಆಘಾತಕಾರಿ ಘಟನೆ ಗುಜರಾತ್ ರಾಜ್ಯದ ಆನಂದ್ ಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮೃತ ಬಾಲಕ, ಮಾರ್ಚ್ 2 ರಂದು ಆನಂದ್‌ನ ವಸಾದ್ ತಾಲೂಕಿನ ಗ್ರಾಮದಲ್ಲಿರುವ ತನ್ನ ನಿವಾಸದ ಹೊರಗೆ ನಾಪತ್ತೆಯಾಗಿದ್ದ. ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಲಾಗಿತ್ತು.
ಅಂತಿಮವಾಗಿ ಮಾರ್ಚ್ 4 ರಂದು ಆನಂದ್‌ನ ಮಹಿಸಾಗರ್ ನದಿಯ ದಡದಲ್ಲಿ ಪುಟಾಣಿ ಬಾಲಕನ ಶವ ದೊರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ದಿನ ಮೃತ ಬಾಲಕನ ಗ್ರಾಮದ ನಿವಾಸಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಮಗುವಿಗೆ ಪರಿಚಿತನಾಗಿದ್ದನು. ಮಾರ್ಚ್ 2 ರಂದು ಆಟಿಕೆ ಕೊಡಿಸುವ ಆಮಿಷವೊಡ್ಡಿ ಬಾಲಕನನ್ನು ಅಪಹರಿಸಿದ ಆರೋಪಿ, ಆತನನ್ನು ಮಹಿಸಾಗರ ನದಿಯ ದಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ.
ಆದರೆ ಬಾಲಕ ಸಹಾಯಕ್ಕಾಗಿ ಅಳಲು ಪ್ರಾರಂಭಿಸಿದ್ದಾನೆ. ಇದರಿಂದ ಭಯಗೊಂಡ ಆರೋಪಿ, ಬಲವಂತವಾಗಿ ಬಾಲಕನ ತಲೆಯನ್ನು ನೀರಿನಲ್ಲಿ ಹಿಡಿದು ಮಹಿಸಾಗರ ನದಿಯಲ್ಲಿ ಮುಳುಗಿಸಿ ಕೊಂದು ಮನೆಗೆ ಹಿಂದಿರುಗಿದ್ದಾನೆ ಎಂದು ವಸಾದ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕನನ್ನು ಕೊಂದ ನಂತರ ಆರೋಪಿಯು, ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಮಗುವನ್ನು ಅಪಹರಣ ಮಾಡಿರುವ ಬಗ್ಗೆ ಹಿಂದಿಯಲ್ಲಿ ಅನಾಮಧೇಯ ಪತ್ರ ಬರೆದು ಸಂಬಂಧಿಕರೊಬ್ಬರ ಅಂಗಡಿಯಲ್ಲಿ ಬಿಟ್ಟು ಹೋಗಿದ್ದ. ಆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ಕೊಲೆ, ಅಪಹರಣ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.