
ಶಿವಮೊಗ್ಗ: ಸೊರಬ ತಾಲ್ಲೂಕು ಚಿಟ್ಟೂರು ಗ್ರಾಮದ ವಾಸಿಯಾದ ನಿಂಗರಾಜ ಬಿನ್ ಶಿವಪ್ಪ(47) ಇವರು ತಮ್ಮ ಶುಂಠಿ ಹೊಲದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಆರೋಪ ದೃಢಪಟ್ಟಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಅಪರಾಧಿಗೆ ಕಠಿಣ ಕಾರಾಗೃಹ ವಾಸ ಶಿಕ್ಷೆ ನೀಡಿ ಆದೇಶಿಸಿರುತ್ತಾರೆ.
ನಿಂಗರಾಜ ಸರ್ವೇ ನಂ 180/06ರ ಶುಂಠಿ ಹೊಲದಲ್ಲಿ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೊರಬ ವಲಯ ಅಬಕಾರಿ ನಿರೀಕ್ಷಕರು ದಿ.8-9-2022 ರಂದು ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದರು.
ಆರೋಪಿ ಬೆಳೆದಿದ್ದ 5 ರಿಂದ 6 ಅಡಿ ಎತ್ತರದ ಗಿಡಗಳು ಹಾಗೂ 8 ರಿಂದ 10 ಗಾಂಜಾ ಗಿಡಗಳು ಒಟ್ಟು 20 ಹಸಿ ಗಿಡಗಳನ್ನು ಕೀಳಿಸಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರೈಸಿ ಕಲಂ:8(ಬಿ), 8(ಸಿ), 20(ಎ), 20(ಬಿ) ಎನ್‌ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಆರೋಪಿ ನಿಂಗರಾಜ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ವಿಚಾರಣೆ ಕಾಲದಲ್ಲಿ ಸಾಕ್ಷಿಗಳ ಸಾಕ್ಷ್ಯದ ಮತ್ತು ಇನ್ನಿತರ ಪೂರಕ ಸಾಕ್ಷ್ಯಾಧಾರಗಳ ಮೇಲಿಂದ ಹಾಗೂ ಸರ್ಕಾರದ ಪರ ಅಭಿಯೋಜಕ ಎ.ಎನ್.ಸುರೇಶ್ ಕುಮಾರ್ ಮಂಡಿಸಿದ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ಆರೋಪಿ ಮೇಲಿನ ಆರೋಪವು ದೃಢಪಟ್ಟಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಅಪರಾಧಿಗೆ 4 ವರ್ಷಗಳ ಕಠಿಣ ಕಾರಾಗೃಹವಾಸ ಸಜೆ ಮತ್ತು 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಹೆಚ್ಚುವರಿ ಸಜೆ, ಹಾಗೂ 300 ಗ್ರಾಂ ಒಣ ಗಾಂಜಾ ಹೊಂದಿದ್ದಕ್ಕೆ 6 ತಿಂಗಳು ಕಠಿಣ ಕಾರಾಗೃಹವಾಸ ಸಜೆ ಮತ್ತು 5000 ರೂ.ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳು ಹೆಚ್ಚುವರಿ ಸಜೆಯನ್ನು ಇಂದು ತೀರ್ಪು ನೀಡಿ ಆದೇಶಿಸಿರುತ್ತಾರೆ.