ಇಂದಿನ ಆನ್‌ಲೈನ್ ಶಾಪಿಂಗ್ ಜಗತ್ತಿನಲ್ಲಿ ಹಲವರು ಅಗತ್ಯ ವಸ್ತುಗಳನ್ನು ಇಂಟರ್ನೆಟ್ ನಲ್ಲೇ ಖರೀದಿ ಮಾಡುತ್ತಾರೆ. ಅಡುಗೆ ಮನೆಯ ವಸ್ತುಗಳಾದ ಪ್ರೆಶರ್ ಕುಕ್ಕರ್, ಬಾಣಲೆ, ಸ್ಟವ್, ಬ್ರೆಡ್, ಚಿಪ್ಸ್ ಮತ್ತು ಹಿಟ್ಟಿನಂತಹ ದಿನಸಿ ವಸ್ತುಗಳಾಗಿರಲಿ ಎಲ್ಲವನ್ನೂ ಕೇವಲ ಒಂದು ಕ್ಲಿಕ್‌ನಲ್ಲಿ ಖರೀದಿಸಲಾಗುತ್ತದೆ.
ಆದರೆ ಈ ರೀತಿ ಆರ್ಡರ್ ಮಾಡಿದ ವಸ್ತುಗಳು ವರ್ಷ ಕಳೆದರೂ ಮನೆಗೆ ಬಾರದಿದ್ದಾಗ ನಿಮಗೆ ಅದರ ಮೇಲಿನ ನಿರೀಕ್ಷೆ ಹೋಗಿಬಿಡಬಹುದು. ಆದರೆ ಅಮೆಜಾನ್‌ನಲ್ಲಿ ಪ್ರೆಶರ್ ಕುಕ್ಕರ್ ಅನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಅದು ಎರಡು ವರ್ಷದ ನಂತರ ತಲುಪಿದೆ.
ಅಕ್ಟೋಬರ್ 2022 ರಲ್ಲಿ ಆರ್ಡರ್ ಮಾಡಿದ ಪ್ರೆಷರ್ ಕುಕ್ಕರ್ ಅಂತಿಮವಾಗಿ ಆಗಸ್ಟ್ 2024 ರಲ್ಲಿ ಬಂದಿತು. ಕುತೂಹಲಕಾರಿ ವಿಚಾರವೆಂದರೆ ಗ್ರಾಹಕರು ಆರ್ಡರ್ ಅನ್ನು ರದ್ದುಗೊಳಿಸಿ ಮರುಪಾವತಿಯನ್ನು ಸಹ ಸ್ವೀಕರಿಸಿದ್ದಾರೆ. ಆದರೆ ಇದೀಗ ಕುಕ್ಕರ್ ಮನೆಗೆ ಬಂದಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಗ್ರಾಹಕ “2 ವರ್ಷಗಳ ನಂತರ ನನ್ನ ಆರ್ಡರ್ ಅನ್ನು ತಲುಪಿಸಿದ್ದಕ್ಕಾಗಿ ಅಮೆಜಾನ್‌ಗೆ ಧನ್ಯವಾದಗಳು. ಸುದೀರ್ಘ ಕಾಯುವಿಕೆಯ ನಂತರ ಅಡುಗೆಯವರು ಉತ್ಸುಕರಾಗಿದ್ದಾರೆ, ಇದು ವಿಶೇಷವಾದ ಒತ್ತಡದ ಕುಕ್ಕರ್ ಆಗಿರಬೇಕು” ಎಂದು ತಾವು ಆರ್ಡರ್ ಮಾಡಿದ ರಶೀದಿಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡು ವ್ಯಂಗ್ಯ ಮಾಡಿದ್ದಾರೆ.
ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅಮೆಜಾನ್‌ನ ಅಧಿಕೃತ ಗ್ರಾಹಕ ಸೇವಾ ಪುಟ, “ನಮಸ್ಕಾರ ಇದಕ್ಕಾಗಿ ನಾವು ವಿಷಾದಿಸುತ್ತೇವೆ. ದಯವಿಟ್ಟು ಇದನ್ನು ನಮ್ಮ ಬೆಂಬಲ ತಂಡಕ್ಕೆ ವರದಿ ಮಾಡಿ.” ಎಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಹಕ, “ಏನು ವರದಿ ಮಾಡುವುದು? ಆರ್ಡರ್ ಅನ್ನು 2022 ರಲ್ಲಿ ರದ್ದುಗೊಳಿಸಲಾಗಿದೆ ಮತ್ತು ಮರುಪಾವತಿ ಮಾಡಲಾಗಿದೆ ಮತ್ತು ನಿನ್ನೆ ಇದನ್ನು ವಿತರಿಸಲಾಗಿದೆ. ನಾನು ಈಗ ಅದನ್ನು ಹೇಗೆ ಪಾವತಿಸುವುದು?” ಎಂದು ಕಂಪನಿಗೆ ಪ್ರತ್ಯುತ್ತರ ನೀಡಿದ್ದಾರೆ. ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು ಗಮನ ಸೆಳೆಯುತ್ತಿದೆ.