ತಮಿಳುನಾಡಿನ ಕೊಯಮತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಒಡಿಶಾ ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರ್ಚ್ 11 ರಂದು ನಾಯಿ ಕಡಿತಕ್ಕೆ ಒಳಗಾದ ರಾಮ್ ಚಂದರ್, ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೈದ್ಯರು ಅವರನ್ನು ವಿಶೇಷ ಚಿಕಿತ್ಸಾ ಘಟಕಕ್ಕೆ ದಾಖಲಿಸಿದ್ದರು. ಆದರೆ, ಮಾರ್ಚ್ 12 ರಂದು ರಾತ್ರಿ 2.30 ರ ಸುಮಾರಿಗೆ ಆಸ್ಪತ್ರೆಯಲ್ಲಿ ಅಲೆದಾಡುತ್ತಿದ್ದ ಅವರು ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಮ್ ಚಂದರ್ ಅವರಿಗೆ ತೀವ್ರವಾದ ರೇಬೀಸ್ ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಅವರನ್ನು ಪ್ರತ್ಯೇಕ ಘಟಕಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಅವರು ಇದ್ದಕ್ಕಿದ್ದಂತೆ ಎಲ್ಲರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಇದರಿಂದ ವೈದ್ಯಕೀಯ ಸಿಬ್ಬಂದಿ ಕೊಠಡಿಯಿಂದ ಹೊರಹೋಗುವಂತಾಯಿತು. ನಂತರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಮುಖ್ಯಸ್ಥೆ ನಿರ್ಮಲಾ ತಿಳಿಸಿದ್ದಾರೆ.
ನಾಯಿ ಕಡಿತಕ್ಕೊಳಗಾದವರು ಸ್ವಯಂ ಪ್ರೇರಿತವಾಗಿ ಚಿಕಿತ್ಸೆ ಪಡೆಯಬಾರದು ಮತ್ತು ಹತ್ತಿರದ ಸರ್ಕಾರಿ ಆಸ್ಪತ್ರೆಯಿಂದ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳಬೇಕು. ಸಾಮಾನ್ಯವಾಗಿ ನಾಯಿ ಕಡಿತದ ನಾಲ್ಕರಿಂದ ಐದು ವಾರಗಳ ನಂತರ ರೇಬೀಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಡೈಯಾ ಸಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.