ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ತಿಂಗಳು ಬೆಂಗಳೂರಿನ ಬ್ಯುಸಿ ರಸ್ತೆಯಲ್ಲಿ ನಡೆದ ಘಟನೆ ಒಂದರ ವಿಡಿಯೋ ವೈರಲ್ ಆಗಿದೆ. ಕಾರು ಚಾಲಕನೊಬ್ಬ ಎರಡು ಲೇನ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿದ್ದು, ಇದರಿಂದ ಟ್ರಾಫಿಕ್ ಸಂಪೂರ್ಣವಾಗಿ ಜಾಮ್ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಹುತೇಕ ಎಲ್ಲ ವಾಹನಗಳು ಒಂದು ಲೇನ್ ನಲ್ಲಿ ನಿಂತಿದ್ದಾಗ ಈ ಚಾಲಕ ತನ್ನ ಕಾರನ್ನು ಪಕ್ಕದ ಲೇನ್ ಗೆ ನುಗ್ಗಿಸಿದ್ದಾನೆ. ಇದೇ ಸಂದರ್ಭದಲ್ಲಿ ಎದುರುಗಡೆಯಿಂದ ಶಾಲಾ ಬಸ್ ಒಂದು ಬಂದಿದ್ದು, ಇದರ ಪರಿಣಾಮ ಮುಂದೆ ಹೋಗಲಾಗದೆ ಕಾರು ಚಾಲಕ ಕಕ್ಕಾಬಿಕ್ಕಿಯಾಗಿದ್ದಾನೆ.
ಬಳಿಕ ರಿವರ್ಸ್ ನಲ್ಲಿ ತನ್ನ ಕಾರನ್ನು ತೆಗೆದುಕೊಂಡಿದ್ದು, ಅಲ್ಲಿಯವರೆಗೆ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಇತರೆ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಇದರ ವಿಡಿಯೋ ಮಾಡಿಕೊಂಡವರೊಬ್ಬರು ಜುಲೈ 22ರಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ವರ್ತೂರು ಬಳಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ ಕಾರಿದ್ದಾರೆ. ಇನ್ನು ಈ ವಿಡಿಯೋ ಬೆಂಗಳೂರು ಟ್ರಾಫಿಕ್ ಪೊಲೀಸರ ಗಮನಕ್ಕೂ ಸಹ ಬಂದಿದ್ದು, ಅವರು ಕಾರು ಚಾಲಕನಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.