ನವದೆಹಲಿ: ದೆಹಲಿ ಜಲ ಮಂಡಳಿಯ ಜಲ ಸಂಸ್ಕರಣಾ ಘಟಕದಲ್ಲಿ 40 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಸುಮಾರು 12 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಭಾನುವಾರ ಹೊರತೆಗೆಯಲಾಗಿದೆ ಎಂದು ಜಲ ಸಚಿವ ಅತೀಶ್ ಹೇಳಿದ್ದಾರೆ.
ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ. ಆತ ಬೋರ್‌ವೆಲ್ ಕೋಣೆಗೆ ಹೇಗೆ ಪ್ರವೇಶಿಸಿದ ಹೇಗೆ ಬೋರ್ ವೆಲ್ ನಲ್ಲಿ ಬಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಹಲವು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ ಎನ್‌ಡಿಆರ್‌ಎಫ್ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಪಶ್ಚಿಮ ದೆಹಲಿಯ ಕೇಶೋಪುರ್ ಮಂಡಿ ಪ್ರದೇಶದ ಡಿಜೆಬಿ ಪ್ಲಾಂಟ್‌ನಲ್ಲಿ ವ್ಯಕ್ತಿಯೊಬ್ಬರು ಬೋರ್‌ವೆಲ್‌ಗೆ ಬಿದ್ದಿದ್ದಾರೆ ಎಂದು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ವಿಕಾಸಪುರಿ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. 40 ಅಡಿ ಆಳದ ಬೋರ್‌ವೆಲ್ ಪೈಪ್‌ನ ವ್ಯಾಸ 1.5 ಅಡಿ ಇದೆ. ಬೋರ್‌ವೆಲ್‌ನಲ್ಲಿ ಬಿದ್ದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.