ಕನ್ನಡಕ ಹಾಕಲು ಬಯಸದವರು ಕಾಂಟಾಕ್ಟ್ ಲೆನ್ಸ್ ಧರಿಸುತ್ತಾರೆ. ಆದರೆ ಕಾಂಟಾಕ್ಟ್ ಲೆನ್ಸ್ ಧರಿಸಿದಾಗ ಅತಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವುಗಳನ್ನು ಮೇಂಟೇನ್ ಮಾಡುವುದು ಕೂಡ ಅತ್ಯಗತ್ಯ. ಪ್ರತಿ ರಾತ್ರಿ ಕಾಂಟಾಕ್ಟ್ ಲೆನ್ಸ್ ತೆಗೆದು ನಿಗದಿಪಡಿಸಿದ ಸಲ್ಯೂಷನ್ ತುಂಬಿದ ಡಬ್ಬಿಯಲ್ಲಿ ಹಾಕಬೇಕಾಗುತ್ತದೆ.
ಒಂದೊಮ್ಮೆ ರಾತ್ರಿ ಕಾಂಟಾಕ್ಟ್ ಲೆನ್ಸ್ ತೆಗೆಯಲು ಮರೆತು ಹಾಗೇ ಮಲಗಿದರೆ ಬೆಳಗ್ಗೆ ಕಣ್ಣು ಕೆಂಪಗಾಗಿರುತ್ತದೆ. ಜೊತೆಗೆ ಇತರೆ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಹೀಗೆ ಕಾಂಟಾಕ್ಟ್ ಲೆನ್ಸ್ ತೆಗೆಯಲು ಮರೆತು ಮಲಗಿದ ಯುವಕನೊಬ್ಬ ಈಗ ಕಣ್ಣನ್ನೇ ಕಳೆದುಕೊಂಡಿದ್ದಾನೆ. ಇಂತಹದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ.
21 ವರ್ಷದ ಮೈಕ್ ಪಾರ್ಟ್ ಟೈಮ್ ಕೆಲಸವಾಗಿ ಮಕ್ಕಳನ್ನು ನೋಡಿಕೊಳ್ಳುವುದನ್ನು ಮಾಡುತ್ತಿದ್ದ. ಈಗ ಹೀಗೆ ಒಮ್ಮೆ ಒತ್ತಡದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ತೆಗೆಯುವುದನ್ನು ಮರೆತು ಹಾಗೆಯೇ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಕಣ್ಣು ಕೆಂಪಗಾಗಿದೆ. ಅದರ ಜೊತೆಗೆ ಆತನಿಗೆ ಕಣ್ಣು ಮಂಜಾದಂತೆ ಅನಿಸಿದೆ.
ದಿನ ಕಳೆದಂತೆ ಮೈಕ್, ಯಾಕೋ ಸರಿಯಾಗುತ್ತಿಲ್ಲ ಎಂದು ಕಣ್ಣಿನ ವೈದ್ಯರ ಬಳಿ ತಪಾಸಣೆಗೆ ತೆರಳಿದಾಗ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದೆ. ಮಾಂಸ ಭಕ್ಷಕ ಪರಾವಲಂಬಿ ಜೀವಿ ಆತನ ಒಂದು ಕಣ್ಣನ್ನೇ ತಿಂದಿರುವುದು ತಿಳಿದುಬಂದಿದೆ. ಇದೀಗ ಕಣ್ಣು ಟ್ರಾನ್ಸ್ ಪ್ಲಾಂಟ್ ಮಾಡಬೇಕೆಂದು ವೈದ್ಯರು ಹೇಳಿದ್ದು ಶೇಕಡ 50 ದೃಷ್ಟಿ ಬರಬಹುದು ಎನ್ನಲಾಗಿದೆ.