ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಆಘಾತಕಾರಿ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕೇವಲ ಕೆಲವೆ ಇಂಚುಗಳಲ್ಲಿ ಸಾವಿನಿಂದ ಪಾರಾಗಿದ್ದಾನೆ. ಚಾಲಕನ ಸಮಯಪ್ರಜ್ಞೆ ಜಾಗೂ ದೃಢ ನಿರ್ಧಾರದಿಂದ ನಡೆಯಬೇಕಿದ್ದ ಗಂಡಾಂತರ ತಪ್ಪಿದೆ.
ಮುಂಬೈನ ಶಿವಡಿ ಸ್ಟೇಷನ್ ನ ರೈಲ್ವೇ ಹಳಿಗಳ ಮೇಲೆ ವ್ಯಕ್ತಿಯೊಬ್ಬ ನಡೆದುಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುತ್ತಿದ್ದ. ರೈಲು ಸಮೀಪಿಸುತ್ತಿದ್ದಂತೆ, ವ್ಯಕ್ತಿ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಮಲಗಿದ್ದಾನೆ. ಆದರೆ, ವ್ಯಕ್ತಿಯನ್ನ ನೋಡಿದ ರೈಲು ಚಾಲಕ ತುರ್ತು ಬ್ರೇಕ್‌ಗಳನ್ನು ಎಳೆದ ನಂತರ ರೈಲು ತಕ್ಷಣವೇ ಹಳಿಗಳ ಮೇಲೆ ನಿಂತಿದೆ, ಆ ವ್ಯಕ್ತಿಯ ಜೀವ ಬಚಾವಾಗಿದೆ. ರೈಲು ನಿಂತಿದ್ದೆ ತಡ ಆರ್‌ಪಿಎಫ್ ಸಿಬ್ಬಂದಿಗಳು ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಅವನ ಕಡೆಗೆ ಧಾವಿಸಿದ್ದಾರೆ. ಆತನನ್ನ ಹಳಿಯಿಂದ ಪ್ಲಾಟ್ ಫಾರ್ಮ್ ಕಡೆಗೆ ಕರೆದುಕೊಂಡು ಬಂದಿದ್ದಾರೆ. ಈ ಘಟನೆಯು ಬೆಳಿಗ್ಗೆ 11:45 ರ ಸುಮಾರಿಗೆ ನಡೆದಿದೆ.
ಮೋಟಾರ್‌ಮ್ಯಾನ್ ಮಾಡಿದ ಕೆಲಸ ಶ್ಲಾಘನೀಯ, ಮುಂಬೈನ ಶಿವಡಿ ನಿಲ್ದಾಣದಲ್ಲಿ, ಮೋಟರ್‌ಮ್ಯಾನ್ ಟ್ರ್ಯಾಕ್‌ನಲ್ಲಿ ಒಬ್ಬ ವ್ಯಕ್ತಿ ಬಿದ್ದಿರುವುದನ್ನು ನೋಡಿದ್ದಾರೆ. ಅವರು ತ್ವರಿತವಾಗಿ ಮತ್ತು ತಿಳುವಳಿಕೆಯಿಂದ ತುರ್ತು ಬ್ರೇಕ್ ಹಾಕಿ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ನಿಮ್ಮ ಜೀವವು ಅಮೂಲ್ಯವಾಗಿದೆ, ನಿಮಗಾಗಿ ಮನೆಯಲ್ಲಿ ಕಾಯುವ ಜನರಿರುತ್ತಾರೆ, ಸುರಕ್ಷಿತವಾಗಿರಿ ಎಂಬ ಸಂದೇಶದೊಂದಿಗೆ ರೈಲ್ವೇ ಸಚಿವಾಲಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದೆ.