
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೀಸಲು ಅರಣ್ಯ ಪ್ರದೇಶದ ಒತ್ತುವರಿ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಹೆಚ್.ಡಿ. ಉಮೇಶ್(43) ಅವರಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ 5 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಹುಣಸವಳ್ಳಿ ಗ್ರಾಮದ ಸರ್ವೆ ನಂಬರ್ 13ರಲ್ಲಿ ಉಮೇಶ್ 12 ಗುಂಟೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದ ಕುರಿತಂತೆ ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ 2019 ರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ, ಕಂದಾಯ ಸದಸ್ಯ ಕೆ.ಹೆಚ್. ಅಶ್ವತ್ಥ್ ನಾರಾಯಣಗೌಡ ನೇತೃತ್ವದ ಪೀಠ ವಿಚಾರಣೆ ನಡೆಸಿ ಮಾರ್ಚ್ 3ರಂದು ತೀರ್ಪು ನೀಡಿದೆ.
ಒತ್ತುವರಿ ಮಾಡಿರುವ ಉಮೇಶ್ ದಂಡ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಕೂಡಲೇ ಒತ್ತುವರಿ ಜಮೀನು ತೆರವು ಮಾಡಬೇಕು. 60 ದಿನದೊಳಗೆ ಈ ಕುರಿತು ವರದಿ ಸಲ್ಲಿಸಬೇಕು ಎಂದು ವಲಯ ಅರಣ್ಯ ಅಧಿಕಾರಿಗೆ ನ್ಯಾಯ ಪೀಠ ಆದೇಶಿಸಿದೆ.