ಸದ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಂಚಾರ ದಟ್ಟವಾಗಿರುತ್ತದೆ. ಮತ್ತು ಅಂತಹ ಜಾಗಗಳಲ್ಲಿ ಪ್ರವಾಸಿಗರು ತುಂಬಿಹೋಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ಸಂಚಾರ ನಿಯಯ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ತಮಗಿಷ್ಟಬಂದಂತೆ ವರ್ತಿಸಿದರೆ ಅದು ಕಿರಿಕಿರಿಯಾಗುತ್ತದೆ, ಅಷ್ಟೇ ಅಲ್ಲದೇ ಅಪಾಯಕ್ಕೂ ದಾರಿಮಾಡಿಕೊಡುತ್ತದೆ.
ಅಂಥದ್ದೊಂದು ಘಟನೆಯಲ್ಲಿ ಮನಾಲಿಯಲ್ಲಿ ಕಾರ್ ಚಾಲಕನೊಬ್ಬ ಕಾರ್ ನ ಮುಂದಿನ ಎರಡೂ ಡೋರ್ ಗಳನ್ನು ತೆರೆದಿಟ್ಟು ಕಾರ್ ಚಲಾಯಿಸಿದ್ದಾನೆ. ಒಂದು ಕಡೆ ಕಾರ್ ಚಾಲಕ ಡೋರ್ ಹಿಡಿದು ಕಾರ್ ಚಾಲನೆ ಮಾಡ್ತಿದ್ರೆ, ಮತ್ತೊಂದು ಬದಿಯಲ್ಲಿ ವ್ಯಕ್ತಿಯೊಬ್ಬ ಡೋರ್ ಬಂದಿ ನಿಂತು ಸಂಭ್ರಮಿಸಿದ್ದಾನೆ.
ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಜಂಗುಳಿ ಪ್ರದೇಶದಲ್ಲಿ ಇಂತಹ ಹುಚ್ಚಾಟ ಮೆರೆಯುವ ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಚಾಲಕನ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಬೇಕು. ಇವರು ಪ್ರವಾಸಿಗರಲ್ಲ, ಇವರನ್ನ ಅಪರಾಧಿಗಳೆಂದು ಪರಿಗಣಿಸಬೇಕು ಎಂತೆಲ್ಲಾ ಕಿಡಿಕಾರಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಕುಲು ಪೊಲೀಸರು ಕಾರ್ ಚಾಲಕನ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆಯಡಿ 3500 ರೂ. ದಂಡ ಹಾಕಿ ಕ್ರಮ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ದಂಡದ ಚಲನ್ ಪ್ರತಿಯನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶೇಷವಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆ ಕುಲು ಮತ್ತು ಮನಾಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.