ಹರ್ಯಾಣದ ರೋಹ್ಟಕ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಬಾಡಿಗೆದಾರನನ್ನು ಆತನ ಪತಿಯೇ ಸ್ನೇಹಿತರ ಸಹಾಯದಿಂದ ಅಪಹರಿಸಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಯೋಗ ಶಿಕ್ಷಕನಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಕೊಲೆ ನಡೆದಿದೆ. ಆದರೆ, ಪೊಲೀಸರು ದೀರ್ಘ ತನಿಖೆಯ ಬಳಿಕ ಆರೋಪಿಗಳನ್ನು ಬಂಧಿಸಿದ ನಂತರ ಸೋಮವಾರ ಮೃತದೇಹವನ್ನು ಹೊರತೆಗೆಯಲಾಗಿದೆ.
ಅಧಿಕಾರಿಗಳ ಪ್ರಕಾರ, ಹರ್ದೀಪ್ ತನ್ನ ಮನೆಯ ಒಂದು ಭಾಗದಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ ಮತ್ತು ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ್ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ತಿಳಿದುಬಂದಿದೆ.
ಆತ ಚರ್ಖಿ ದಾದ್ರಿಯ ಪಂತವಾಸ್ ಗ್ರಾಮದ ಜಮೀನಿನಲ್ಲಿ 7 ಅಡಿ ಆಳದ ಗುಂಡಿ ತೋಡಲು ಕೆಲವರಿಗೆ ಹಣ ನೀಡಿದ್ದನು. ಡಿಸೆಂಬರ್ 24 ರಂದು, ಹರ್ದೀಪ್ ಮತ್ತು ಆತನ ಕೆಲವು ಸ್ನೇಹಿತರು ಜಗದೀಪ್ ಕೆಲಸ ಮುಗಿಸಿ ವಾಪಸ್ಸಾದ ಬಳಿಕ ಆತನನ್ನು ಅಪಹರಿಸಿದ್ದರು. ಜಗದೀಪ್‌ನ ಕೈಕಾಲುಗಳನ್ನು ಕಟ್ಟಿ, ಚರ್ಖಿ ದಾದ್ರಿಯ ಗುಂಡಿಗೆ ಕರೆದೊಯ್ಯುವಾಗ ಥಳಿಸಿದ್ದರು. ಅಲ್ಲಿಗೆ ತಲುಪಿದ ನಂತರ, ಹರ್ದೀಪ್ ಮತ್ತು ಆತನ ಸ್ನೇಹಿತರು ಜಗದೀಪ್‌ನ ಬಾಯಿ ಮುಚ್ಚಿ, ಆತ ಶಬ್ದ ಮಾಡದಂತೆ ಮಾಡಿ ಗುಂಡಿಗೆ ಎಸೆದು ಮಣ್ಣಿನಿಂದ ಮುಚ್ಚಿ ಜೀವಂತವಾಗಿ ಹೂತಿದ್ದರು.
ಕೊಲೆಯಾಗಿ 10 ದಿನಗಳ ನಂತರ, ಜನವರಿ 3 ರಂದು ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ದೂರು ದಾಖಲಾಗಿತ್ತು. ಪೊಲೀಸರು ಸ್ವಲ್ಪ ಸಮಯದ ಹಿಂದೆ ಜಗದೀಪ್‌ನ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಹರ್ದೀಪ್ ಮತ್ತು ಆತನ ಸ್ನೇಹಿತ ಧರ್ಮಪಾಲ್‌ನನ್ನು ಬಂಧಿಸಲು ಸಾಕಷ್ಟು ಸಾಕ್ಷ್ಯಗಳು ಸಿಕ್ಕವು.
ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಲು ಪ್ರಾರಂಭಿಸಿದಾಗ ಕೊಲೆಯ ವಿವರಗಳನ್ನು ಬಹಿರಂಗಪಡಿಸಿದರು. ಕೊಲೆ ನಡೆದ ಮೂರು ತಿಂಗಳ ನಂತರ, ಮಾರ್ಚ್ 24 ರಂದು ಮೃತದೇಹವನ್ನು ಹೊರತೆಗೆಯಲಾಯಿತು.
“ಈ ಪ್ರಕರಣದಲ್ಲಿ ಇತರ ಆರೋಪಿಗಳಿದ್ದಾರೆ, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ” ಎಂದು ಕ್ರೈಂ ಇನ್ವೆಸ್ಟಿಗೇಶನ್ ಏಜೆನ್ಸಿ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.