ಬೆಂಗಳೂರು: ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಪ್ರಕರಣ ಸಂಬಂಧ ಬಿಎಂಆರ್ ಸಿ ಎಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಅನಾರೋಗ್ಯ ಸಮಸ್ಯೆಯಿಂದ ಅವಘಡ ಸಂಭವಿಸಿದರೆ ಮೆಟ್ರೋ ಸಿಬ್ಬಂದಿ ಕೂಡ ಸಹಾಯಕ್ಕೆ ಬರುತ್ತಿಲ್ಲ. ಇಂತದ್ದೊಂದು ಆತಂಕಕಾರಿ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ವ್ಯಾಪ್ತಿಯ ಮೆಟ್ರೋ ರೈಲಿನಲ್ಲಿ ನಡೆದಿದೆ.
ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ 67 ವರ್ಷದ ತಿಮ್ಮೇಗೌಡ ಎಂಬುವವರಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವಷ್ಟರಲ್ಲಿ ಎದೆನೋವು ಕಾಣಿಸಿಕೊಂಡಿದೆ. ಎಂ.ಜಿ ರಸ್ತೆ ನಿಲ್ದಾಣಕ್ಕೆ ಮೆಟ್ರೋ ರೈಲು ತಲುಪಿದಾಗ ಸಾರ್ವಜನಿಕರು ತಿಮ್ಮೇಗೌಡರನ್ನು ರೈಲಿನಿಂದ ಹೊರ ಕರೆದುಕೊಂಡು ಬಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ. 15 ನಿಮಿಷಗಳವರೆಗೆ ಮೆಟ್ರೋ ಸಿಬ್ಬಂದಿಗಳಾಗಲಿ, ಅಧಿಕಾರಿಗಳಾಗಲಿ ಯಾರೊಬ್ಬರೂ ಅತ್ತ ಸುಳಿದಿಲ್ಲ, ವ್ಯಕ್ತಿ ಎದೆನೋವಿನಿಂದ ಒದ್ದಾಡುತ್ತಿದ್ದರೂ ಗಮನಿಸಿಲ್ಲ. ಕೆಲ ಸಮಯದ ಬಳಿಕ ತಿಮ್ಮೇಗೌಡರನ್ನು ಸ್ಪರ್ಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯದ ಕಾರಣಕ್ಕೆ ತಿಮ್ಮೇಗೌಡ ಕೊನೆಯುಸಿರೆಳೆದಿದ್ದಾರೆ.
ಮೆಟ್ರೋ ಸಿಬ್ಬಂದಿಯ ನಿರ್ಲಕ್ಷದ ಹಿನೆಲೆಯಲ್ಲಿ ಬೈಯ್ಯಪ್ಪನಹಳ್ಳಿ ಪೊಲಿಸರು ಬಿಎಂ ಆರ್ ಸಿ ಎಲ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಉತ್ತರ ನೀಡುವಂತೆ ಮುಖ್ಯ ಭದ್ರತಾ ಅಧಿಕಾರಿಗೆ ನೋಟೀಸ್ ನೀಡಿದ್ದಾರೆ.