ಉಡುಪಿ: ಬಾವಿಯ ಸಮೀಪವಿದ್ದ ತೆಂಗಿನ ಮರ ಹತ್ತಿ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ಬಾವಿಯ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಸಮೀಪದ ಸಲ್ವಾಡಿಯಲ್ಲಿ ನಡೆದಿದೆ.
ಕಾಳಾವರ ಗ್ರಾಮದ ಸಲ್ವಾಡಿಯ ಅಣ್ಣಾ ಸೀನ(54) ಮೃತಪಟ್ಟವರು. ಸಲ್ವಾಡಿಯ ಉದಯ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರು ತೆಂಗಿನ ಕಾಯಿ ಕೀಳಲು ಮರ ಹತ್ತಿದ್ದಾರೆ. ಆಕಸ್ಮಿಕವಾಗಿ ಕೆಳಗೆ ಇದ್ದ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅವರ ಜೊತೆಗಿದ್ದವರು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.