ಬೆಲ್ಜಿಯಂನಲ್ಲಿ ಮಹಿಳೆಯೊಬ್ಬರು ಸುರಂಗ ಮಾರ್ಗದ ರೈಲಿನ ಟ್ರ್ಯಾಕ್ ಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದಿನಿಂದ ವ್ಯಕ್ತಿಯೊಬ್ಬ ಆಕೆಯನ್ನ ವೇಗವಾಗಿ ಬರುತ್ತಿದ್ದ ಟ್ರೈನ್ ಹಾದಿಗೆ ತಳ್ಳಿರುವ ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ಸಂಜೆ ಬ್ರಸೆಲ್ಸ್‌ನ ರೋಜಿಯರ್ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ರೈಲು ನಿಲ್ದಾಣದೊಳಗೆ ಬರುತ್ತಿದ್ದಂತೆ, ಕಪ್ಪು ಟಿ-ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಕಳ್ಳನಂತೆ ಮಹಿಳೆಯ ಹಿಂದೆ ಬಂದು ಅವಳನ್ನ ಬಲವಾಗಿ ತಳ್ಳಿದ್ದಾನೆ.
ಇದರಿಂದ ತನ್ನ ಸಮತೋಲನ ಕಳೆದುಕೊಂಡ ಮಹಿಳೆ, ವೇಗವಾಗಿ ಚಲಿಸುತ್ತಿರುವ ರೈಲಿನ ಮುಂದೆ ಹಳಿಗಳ ಮೇಲೆ ಬೀಳುತ್ತಾಳೆ. ಆದರೆ ರೈಲಿನ ಚಾಲಕನ ಸಮಯ ಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ರೈಲು ಮಹಿಳೆಯಿಂದ ಕೆಲವೇ ಇಂಚುಗಳ ದೂರದಲ್ಲಿ ನಿಂತಿದೆ. ಈ ಘಟನೆಯಿಂದ ಶಾಕ್ ಗೆ ಒಳಗಾಗಿ, ದಿಗ್ಭ್ರಮೆಗೊಂಡ ಮಹಿಳೆ ಟ್ರ್ಯಾಕ್ನಿಂದ ಹೊರಬರಲು ಅಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ.
ಮಹಿಳೆ ಹಳಿಗಳ ಮೇಲೆ ಬೀಳುತ್ತಿರುವುದನ್ನು ಗಮನಿಸಿದ ರೈಲು ಚಾಲಕ ತ್ವರಿತವಾಗಿ ತುರ್ತು ಬ್ರೇಕ್‌ಗಳನ್ನು ಹಾಕಿದ್ದರಿಂದ ರೈಲು ತಕ್ಷಣವೇ ಸ್ಥಗಿತಗೊಂಡಿದೆ. ಘಟನೆ ನಂತರ ಸಂತ್ರಸ್ತೆ ಮತ್ತು ಮೆಟ್ರೋ ಚಾಲಕ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಮನೆಗೆ ಹೋಗಲು ಅನುಮತಿಸಲಾಯಿತು. ಚಾಲಕನ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿದಿದೆ, ಆದರೆ ಈ ಘಟನೆಯಿಂದ ಆತ ಆಘಾತಕ್ಕೊಳಗಾಗಿದ್ದಾನೆ, ಎಂದು ಮೆಟ್ರೋ ನಿರ್ವಹಿಸುವ ಬ್ರಸೆಲ್ಸ್ ಸಾರ್ವಜನಿಕ ಸಾರಿಗೆ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಮಹಿಳೆಯನ್ನು ರೈಲಿನ ಮುಂದೆ ತಳ್ಳಿ ಓಡಿ ಹೋಗಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಅವನ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ನ್ಯಾಯಾಲಯದಿಂದ ಮನೋವೈದ್ಯಕೀಯ ತಜ್ಞರನ್ನು ನೇಮಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.