ಬ್ಲೂಟೂತ್ ಹೆಡ್‌ಫೋನ್ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ವರದಿಯಾಗಿದೆ. ಸದಾಕಾಲ ಬ್ಲೂಟೂತ್ ನಲ್ಲಿ ಹಾಡು ಕೇಳುತ್ತಿದ್ದ ಪನ್ನೀರ್ ಸೆಲ್ವಂ ಸೋಮವಾರ ಜೂನ್ 3 ರಂದು ಎಂದಿನಂತೆ ಹೆಡ್ ಫೋನ್ ನಲ್ಲಿ ಹಾಡು ಕೇಳ್ತಿದ್ದಾಗ ಬ್ಲೂಟೂತ್ ಸಾಧನ ಸ್ಫೋಟಗೊಂಡಿದೆ. ಕಳಯಾರ್‌ಕೋಯಿಲ್ ಬಳಿಯ ಮಥುಕನ್‌ಮೈ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಸ್ಫೋಟದಿಂದ ಗಾಯಗೊಂಡ ನಂತರ ಪನ್ನೀರ್ ಸೆಲ್ವಂ ಅವರನ್ನು ಚಿಕಿತ್ಸೆಗಾಗಿ ಶಿವಗಂಗಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಎಡ ಕಿವಿಗೆ ತೀವ್ರ ಪೆಟ್ಟಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, ಬ್ಲೂಟೂತ್ ಹೆಡ್‌ಫೋನ್‌ಗಳು ಸ್ಫೋಟಗೊಳ್ಳುವುದು ಅಪರೂಪವಾದರೂ, ಲೀಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿರುವ ಯಾವುದೇ ಎಲೆಕ್ಟ್ರಾನಿಕ್ ಸಾಧನವು ಕೆಲವು ಸಂದರ್ಭಗಳಲ್ಲಿ ಸ್ಫೋಟಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಂಭವನೀಯ ಅಪಾಯಗಳನ್ನು ಕಡಿಮೆ ಮಾಡಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ ಎನ್ನುತ್ತಾರೆ.
ಹಾಗಾದರೆ ಅಂತಹ ಘಟನೆಯನ್ನು ತಪ್ಪಿಸುವುದು ಹೇಗೆ ಎಂಬ ಕೆಲವು ಸಲಹೆಗಳು ಇಲ್ಲಿವೆ
ನಿಮ್ಮ ಬ್ಲೂಟೂತ್ ಇಯರ್‌ಫೋನ್‌ಗಳನ್ನು ತುಂಬಾ ಬಿಸಿಯಾಗಿರುವ ಅಥವಾ ತುಂಬಾ ತಂಪಾಗಿರುವ ತೀವ್ರವಾದ ತಾಪಮಾನಕ್ಕೆ ಒಡ್ಡಬೇಡಿ. ಹೆಚ್ಚಿನ ತಾಪಮಾನವು ಬ್ಯಾಟರಿಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
ನಿಮ್ಮ ಬ್ಲೂಟೂತ್ ಹೆಡ್‌ಫೋನ್ ಖರೀದಿಯೊಂದಿಗೆ ಒದಗಿಸಲಾದ ಚಾರ್ಜರ್ ಅನ್ನು ಬಳಸಿ. ಹೊಂದಾಣಿಕೆಯಾಗದ ಚಾರ್ಜರ್ ಅನ್ನು ಬಳಸುವುದರಿಂದ ಬ್ಯಾಟರಿಗೆ ಹಾನಿಯಾಗಬಹುದು. ಇದು ಬ್ಯಾಟರಿ ಬಿಸಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.
ನಿಮ್ಮ ಬ್ಲೂಟೂತ್ ಹೆಡ್‌ಫೋನ್ ಸಂಪೂರ್ಣವಾಗಿ ಚಾರ್ಜ್ ಆದ ನಂತರ, ನೀವು ಅದನ್ನು ತಕ್ಷಣವೇ ಚಾರ್ಜರ್‌ನಿಂದ ತೆಗೆದುಹಾಕಬೇಕು. ಅತಿಯಾಗಿ ಚಾರ್ಜ್ ಮಾಡುವುದರಿಂದ ಬ್ಯಾಟರಿ ಹಾಳಾಗಬಹುದು.
ನಿಮ್ಮ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಯಾವುದೇ ಹಾನಿಯ ಸಂದರ್ಭದಲ್ಲಿ ತಕ್ಷಣ ಇಯರ್‌ಫೋನ್ ಬಳಸುವುದನ್ನು ನಿಲ್ಲಿಸಿ.
ಬಳಕೆಯಲ್ಲಿ ಇಲ್ಲದಿದ್ದಾಗ ನಿಮ್ಮ ಬ್ಲೂಟೂತ್ ಇಯರ್‌ಫೋನ್‌ಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಇರಿಸುವುದನ್ನು ತಪ್ಪಿಸಿ. ತಂಪಾದ, ಶುಷ್ಕ ಸ್ಥಳದಲ್ಲಿ ಬ್ಯೂಟೂತ್ ಹೆಡ್ ಫೋನ್ ಸಂಗ್ರಹಿಸಿಡಿ.