ಚೆನ್ನೈ: ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಲು ಅವಳಿ ಸೋದರನ ಕಥೆ ಕಟ್ಟಿರುವಂತಹ ವಿಲಕ್ಷಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
30 ವರ್ಷದ ವ್ಯಕ್ತಿ ವಾಲಾಂಡರ್ ಬೆನೆಟ್ ರಯಾನ್ ಎಂಬಾತನಿಗೆ ಈಗಾಗಲೇ ಮದುವೆಯಾಗಿ ಮಗು ಇತ್ತು. ಆದರೆ ಇದನ್ನು ಮರೆಮಾಚಿ ಆತ ಎರಡನೇ ಮದುವೆಯಾಗಲು ನಿರ್ಧರಿಸಿದ್ದ. ನಿಶ್ಚಿತಾರ್ಥವೂ ನಡೆದಿತ್ತು. ಈ ವೇಳೆ ಆತ ತನ್ನಂತೆ ಇನ್ನೊಬ್ಬ ಸೋದರನಿದ್ದಾನೆ ಎಂಬ ಕಟ್ಟುಕಥೆ ಕಟ್ಟಿದ್ದಾನೆ. ಕೊನೆಗೂ ಈತನ ಮೋಸದಾಟ ಅರಿವಾದ ಯುವತಿಯು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸ್ ವಿಚಾರಣೆ ವೇಳೆ, ರಯಾನ್ ತನ್ನ ಮೊದಲ ಮದುವೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ ಮತ್ತು ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆಕೆಯ ಕುಟುಂಬದಿಂದ 3.5 ಲಕ್ಷ ರೂಪಾಯಿ ವರದಕ್ಷಿಣೆ ಪಡೆದಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ರಯಾನ್ ಹಾಗೂ ಆತನ ತಾಯಿ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ: ಸ್ವಾತಂತ್ರ್ಯ ದಿನದಂದು ರೈತರ ಟ್ರಾಕ್ಟರ್ ಪರೇಡ್
ಅರುಂಬಕ್ಕಂನ ನಿವಾಸಿಯಾಗಿರುವ ರಯಾನ್ ತನ್ನ 21 ವರ್ಷದ ಸಹೋದ್ಯೋಗಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ, ನಂತರ ಇದು ಮದುವೆ ಹಂತಕ್ಕೆ ಹೋಗಿದ್ದು, ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದಾಗ್ಯೂ, ಆರೋಪಿ ತನಗೆ ಈಗಾಗಲೇ ವಿವಾಹವಾಗಿರುವ ಬಗ್ಗೆ ಹೇಳಿರಲಿಲ್ಲ. ಆದರೆ ಸ್ನೇಹಿತನೊಬ್ಬ ಈತನ ಬಗ್ಗೆ ಹೇಳಿದಾಗ ಯುವತಿಯು ಆರೋಪಿ ಬಳಿ ವಿಚಾರಿಸಿದ್ದಾಳೆ. ಈ ವೇಳೆ ಈತ ಅವಳಿ ಸೋದರನ ಬಗ್ಗೆ ಕಥೆ ಕಟ್ಟಿದ್ದಾನೆ.
ಯುವತಿಯನ್ನು ಮನವೊಲಿಸಲು ರಯಾನ್, ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಮತ್ತು ಅವಳಿ ಸಹೋದರನ ಜನನ ಪ್ರಮಾಣಪತ್ರವನ್ನು ಸಹ ತಯಾರಿಸಿದ. ತನ್ನ ಸಹೋದರ ಮದುವೆಯಾಗಿ ದುಬೈನಲ್ಲಿ ನೆಲೆಸಿದ್ದಾನೆ ಎಂದು ಹೇಳಿ ನಂಬಿಸಿದ್ದಾನೆ. ಆದರೆ ಸಂಬಂಧಿಯೊಬ್ಬರು ಕೂಡ ಈತನಿಗೆ ಈಗಾಗಲೇ ಮದುವೆಯಾಗಿದೆ ಎಂದು ವಿಚಾರ ತಿಳಿಸಿದಾಗ ಯುವತಿಯ ಪೋಷಕರು ವರದಕ್ಷಿಣೆ ಮೊತ್ತ ವಾಪಾಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ರಯಾನ್ ಆಸಿಡ್ ದಾಳಿ ಬೆದರಿಕೆಯೊಡ್ಡಿದ್ದಾನೆ.
ರಯಾನ್ ನಿಂದ ಮೋಸ ಹೋದ ಯುವತಿಯ ಕುಟುಂಬವು ರಯಾನ್ ಮತ್ತು ಆತನ ತಾಯಿ ಸೆಲಿನಾ ವಿರುದ್ಧ ಆವಡಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.