ಸೂರತ್: ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿದೆ.
5 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ 27 ವರ್ಷದ ವ್ಯಕ್ತಿಗೆ ಸೂರತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಂತ್ರಸ್ತೆಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ರಕ್ಷಣೆಯ ನ್ಯಾಯಾಲಯ(ಪೋಕ್ಸೊ) ನ್ಯಾಯಾಧೀಶರಾದ ಪಿ.ಎಸ್. ಕಲಾ ಶಿಕ್ಷೆಯನ್ನು ಘೋಷಿಸಿದ ನಂತರ, ಅಪರಾಧಿ ಸುಜಿತ್ ಸಾಕೇತ್ ಕೋಪಗೊಂಡು ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ.
ಆದರೆ, ಪಾದರಕ್ಷೆ ನ್ಯಾಯಾಧೀಶರಿಗೆ ತಾಗದೆ ಸಾಕ್ಷಿ ಪೆಟ್ಟಿಗೆ ಬಳಿ ಬಿದ್ದಿದೆ. ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸುಜಿತ್ ಆರೋಪಿಸಿದ್ದಾನೆ.
ಪ್ರಾಸಿಕ್ಯೂಷನ್ ಪ್ರಕಾರ, ಸುಜಿತ್ ಸಾಕೇತ್ ಮಧ್ಯಪ್ರದೇಶ ನಿವಾಸಿ. ಆತ ಏಪ್ರಿಲ್ 30 ರಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಲಿಪಶು ವಲಸೆ ಕಾರ್ಮಿಕನ ಮಗಳು ಎಂದು ವರದಿ ತಿಳಿಸಿದೆ.
ಚಾಕೊಲೇಟ್ ಕೊಡಿಸುವುದಾಗಿ ಭರವಸೆ ನೀಡಿ ಬಾಲಕಿಗೆ ಆಮಿಷವೊಡ್ಡಿದ್ದ ಆರೋಪಿ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸಿಕ್ಕಿಬೀಳಬಹುದೆಂಬ ಭಯದಿಂದ ಮಗುವನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ.
ನಂತರ ಸೂರತ್‌ನ ಹಜಿರಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.
ನ್ಯಾಯಾಲಯವು ತನ್ನ ತೀರ್ಪನ್ನು ನೀಡುವಾಗ ಪ್ರಾಸಿಕ್ಯೂಷನ್‌ನಿಂದ 29 ಸಾಕ್ಷಿಗಳನ್ನು ಪರೀಕ್ಷಿಸಿದೆ. ಆದೇಶವನ್ನು ಘೋಷಿಸುವ ಮೊದಲು ನ್ಯಾಯಾಲಯವು 53 ಸಾಕ್ಷ್ಯಚಿತ್ರ ಸಾಕ್ಷ್ಯಗಳನ್ನು ಪರಿಗಣಿಸಿದೆ ಎಂದು ಹೇಳಲಾಗಿದೆ.