ಪ್ರೀತಿ ಕಳೆದುಕೊಂಡವರು ಮತ್ತೆ ಅದನ್ನು ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಬಿಟ್ಟು ಹೋದ ಪ್ರೇಮಿ ವಾಪಸ್ ಬರಲಿ ಎನ್ನುವ ಕಾರಣಕ್ಕೆ ಮಾಂತ್ರಿಕನ ಮೊರೆ ಹೋದ ಉದ್ಯಮಿಯೊಬ್ಬ, ಮೋಸ ಹೋಗಿದ್ದಾನೆ. ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಮಕರಬಾ ಪ್ರದೇಶದಲ್ಲಿ, ಎಲೆಕ್ಟ್ರಾನಿಕ್ ಗೂಡ್ಸ್ ಶಾಪ್ ನಡೆಸುತ್ತಿರುವ ಅಜಯ್ ಪಟೇಲ್ ಸಂಗಾತಿ ಬಿಟ್ಟು ಹೋಗಿದ್ದಳಂತೆ. ಬೇರೆಯಾದ್ಮೇಲೆ ಆತ ಬೇಸರಗೊಂಡಿದ್ದನಂತೆ. ಶತಾಯಗತಾಯ ಆಕೆಯನ್ನು ಪಡೆಯಲು ಮುಂದಾಗಿದ್ದನಂತೆ. ಇದೇ ಕಾರಣಕ್ಕೆ ಮಂತ್ರವಾದಿಯೊಬ್ಬನ ಮೊರೆ ಹೋಗಿದ್ದಾನೆ.
ಅದು, ಇದು ವಿಧಿ-ವಿಧಾನಗಳ ಕಥೆ ಹೇಳಿ ಮಾಂತ್ರಿಕ ಒಂದಲ್ಲ ಎರಡಲ್ಲ ಬರೋಬ್ಬರಿ 43 ಲಕ್ಷ ರೂಪಾಯಿ ದೋಚಿದ್ದಾನೆ. ಮೇ 2020 ರಲ್ಲಿ ಪಟೇಲ್ ಮೊದಲ ಬಾರಿಗೆ 11,400 ರೂಪಾಯಿಯನ್ನು ನೀಡಿದ್ದನಂತೆ. ನಂತ್ರ ಮಂತ್ರವಾದಿ ಒಂದಲ್ಲ ಒಂದು ನೆಪ ಹೇಳಿ 43 ಲಕ್ಷ ದೋಚಿದ್ದಾನೆ.
ಎಷ್ಟೇ ಹಣ ಖರ್ಚು ಮಾಡಿದ್ರು ಹುಡುಗಿ ವಾಪಸ್ ಬರಲಿಲ್ಲ. ಆಗ ಪಟೇಲ್ ಗೆ ಜ್ಞಾನೋದಯವಾಗಿದೆ. ಕೊನೆಯಲ್ಲಿ ಸರ್ಖೇಜ್ ಪೊಲೀಸರನ್ನು ಸಂಪರ್ಕಿಸಿ, ದೂರು ನೀಡಿದ್ದಾನೆ. ಹಣ ನೀಡಿದ ಸಾಕ್ಷ್ಯಗಳನ್ನು ಆತ ನೀಡಿದ್ದಾನೆ. 400 ಕ್ಕೂ ಹೆಚ್ಚು ಆಡಿಯೋ ರೆಕಾರ್ಡಿಂಗ್ ಗಳನ್ನು ಪೊಲೀಸರಿಗೆ ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಅನಿಲ್ ಜೋಶಿ, ಆತನ ಪತ್ನಿ ಹಾಗೂ ಧರಮ್ ಜಿ ವಿರುದ್ಧ ಎಫ್‌ಐಆರ್ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪೀಡಿತನ ತಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಂತೆ. ಆತನಿಗೆ ಇಬ್ಬರು ಸಹೋದರಿಯರಿದ್ದಾರಂತೆ. ಅವರೆಲ್ಲರ ಸಮಸ್ಯೆ ಬಗೆಹರಿಸುವುದಾಗಿ ಜೋಶಿ ಭರವಸೆ ನೀಡಿದ್ದನಂತೆ. ಪಟೇಲ್ ಪ್ರೇಮಿ ಬೇರೆ ಹುಡುಗಿ ಜೊತೆ ಮದುವೆಯಾದಳಂತೆ. ಇದು ತಿಳಿಯುತ್ತಿದ್ದಂತೆ, ಪಟೇಲ್, ಜೋಶಿಗೆ ಹಣ ವಾಪಸ್ ನೀಡಲು ಕೇಳಿದ್ದಾನೆ. ಆದ್ರೆ ಜೋಶಿ ಹಣ ನೀಡಲು ನಿರಾಕರಿಸಿದ್ದಾನೆ. ಒತ್ತಡ ಹೇರಿದ್ರೆ ಸರಿ ಇರುವುದಿಲ್ಲವೆಂದು ಧಮಕಿ ಹಾಕಿದ್ದಾನೆ ಎಂದು ಪಟೇಲ್ ಆರೋಪ ಮಾಡಿದ್ದಾನೆ.
ಆರಂಭದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ರು. ಆದ್ರೆ ನಂತ್ರ ವಿಚಾರಣೆ ಮುಂದುವರೆಸಿಲ್ಲ. ಪೊಲೀಸ್ ಮಧ್ಯೆ ಬೇರೆ ವ್ಯವಹಾರ ನಡೆದಿರುವ ಅನುಮಾನವಿದೆ. ಹಾಗಾಗಿ ಪೊಲೀಸ್ ಆಯುಕ್ತರ ಮೊರೆ ಹೋಗುವುದಾಗಿ ಪಟೇಲ್ ಪರ ವಕೀಲರು ಹೇಳಿದ್ದಾರೆ.