ಒತ್ತಡದ ಕೆಲಸ, ಜೀವನ ಶೈಲಿ ಮುಂತಾದವುಗಳಿಂದ ಇಂದು ಯುವ ಜನತೆಯಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕುಳಿತಲ್ಲೇ ಕುಸಿದು ಬಿದ್ದು ಅನೇಕರು ಮೃತಪಡುತ್ತಿದ್ದಾರೆ. ಯಾವುದೇ ಹೃದಯ ಸಮಸ್ಯೆ ಇಲ್ಲದವರು ಹೀಗೇ ಏಕಾಏಕಿ ಹೃದಯಸ್ತಂಭನದಿಂದ ಮೃತಪಡುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಇದೀಗ ಕೆಲಸ ಮಾಡುತ್ತಿರುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಸಿಸಿ ಟಿವಿ ದೃಶ್ಯಾವಳಿ ವೈರಲ್ ಆಗಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದೆ. ಕೋಲ್ಕತ್ತಾ ನಿವಾಸಿ ಪಿಂಟು ಕುಮಾರ್ ಮೃತ ದುರ್ದೈವಿ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯಾವಳಿ ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ, 42 ವರ್ಷದ ಪಿಂಟು ಕುಮಾರ್ ಎಂಬವರು ತಮ್ಮ ಕೆಲಸದ ಸ್ಥಳದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದರು. ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಪೊಲೀಸರು ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಭಾಗಲ್ಪುರದಲ್ಲಿರುವ ಮಾಯಾಗಂಜ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.
ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅವರ ಸಾವಿಗೆ ಬಹುಶಃ ಹೃದಯಾಘಾತವೇ ಕಾರಣ ಎಂಬ ಊಹಾಪೋಹಗಳಿವೆ. ಇನ್ನು ಕೆಲವರು ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಊಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಳು ಅವರ ಹಠಾತ್ ಸಾವಿನ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಬಹುದು.
ಜನರು ಇದ್ದಕ್ಕಿದ್ದಂತೆ ಕುಸಿದು ಸಾಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದು, ಜಗತ್ತನ್ನು ಬೆಚ್ಚಿಬೀಳಿಸಿದೆ. ಇದೇ ರೀತಿ ಪತ್ರಿಕೆ ಓದುತ್ತಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ಸುದ್ದಿಯಾಗಿತ್ತು. ರಾಜಸ್ಥಾನದ ಬಾರ್ಮರ್‌ನಲ್ಲಿ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.
ಈ ಹಿಂದೆ, ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಮದುವೆಯೊಂದರಲ್ಲಿ ಡ್ಯಾನ್ಸ್ ಮಾಡುವಾಗ 19 ವರ್ಷದ ಹುಡುಗನೊಬ್ಬ ಕುಸಿದುಬಿದ್ದು ಮೃತಪಟ್ಟ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.