ನವದೆಹಲಿ: ಖಾಲಿ ಫ್ಲೈಟ್‌ನೊಳಗೆ ಅಂಧ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟಿರುವುದಾಗಿ ವ್ಯಕ್ತಿಯೊಬ್ಬ ವಿಸ್ತಾರಾ ಏರ್ ಲೈನ್ಸ್ ವಿರುದ್ಧ ಆರೋಪ ಮಾಡಿದ್ದು, ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ. ಅಲ್ಲದೇ ಕ್ರಮದ ಭರವಸೆ ನೀಡಿದೆ.
ತನ್ನ ತಾಯಿ ಆಗಸ್ಟ್ 31 ರಂದು ದೆಹಲಿಯಿಂದ ಕೋಲ್ಕತ್ತಾಗೆ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಬಜೆಟ್ ಕ್ಯಾರಿಯರ್ ವಿಸ್ತಾರಾ ವಿಮಾನದಲ್ಲಿ ಸಹಾಯದ ಪ್ರಯಾಣದ ಯೋಜನೆಗೆ ಹಣ ಪಾವತಿಸಿದ್ದರೂ, ಕಣ್ಣುಕಾಣದ ನನ್ನ ತಾಯಿಯನ್ನು ಖಾಲಿ ವಿಮಾನದೊಳಗೆ ಒಬ್ಬಂಟಿಯಾಗಿ ಬಿಟ್ಟಿದ್ದಾರೆ. ವಿಮಾನಯಾನ ಸಂಸ್ಥೆ ಬೋರ್ಡಿಂಗ್‌ನಿಂದ ಅವರ ಪ್ರಯಾಣದುದ್ದಕ್ಕೂ ಅವರಿಗೆ ಸಹಾಯವನ್ನು ನೀಡಬೇಕಿತ್ತು. ಅವರನ್ನು ಉದ್ದೇಶಿತ ಗಮ್ಯಸ್ಥಾನದಲ್ಲಿ ಇಳಿಸುವವರೆಗೆ ನೋಡಿಕೊಳ್ಳಬೇಕಿತ್ತು. ಆದರೆ ಆ ರೀತಿ ಸೇವೆ ನೀಡದೇ ಖಾಲಿ ವಿಮಾನದಲ್ಲೇ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.
ಆಯುಷ್ ಕೇಜ್ರಿವಾಲ್ ಎಂಬ ವ್ಯಕ್ತಿ ತನ್ನ ತಾಯಿಯನ್ನು ದೆಹಲಿ-ಕೋಲ್ಕತ್ತಾ ವಿಸ್ತಾರಾ ವಿಮಾನದಲ್ಲಿ ಕಳಿಸಿದ್ದು, ಆಕೆಯನ್ನು ಒಬ್ಬಂಟಿಯಾಗಿ ಬಿಟ್ಟಿದ್ದಾರೆ. ಖಾಲಿ ವಿಮಾನದಲ್ಲಿ ತಾಯಿ ಕುಳಿತಿರುವುದನ್ನು ಕ್ಲೀನಿಂಗ್ ಸಿಬ್ಬಂದಿ ಗಮನಿಸಿದ ನಂತರವೇ ಆಕೆಗೆ ವಿಮಾನದಿಂದ ಹೊರಬರಲು ಸಹಾಯ ಮಾಡಲಾಯಿತು ಎಂದು ಹೇಳಿದ್ದಾರೆ.
ಅವರ ಆರೋಪದ ನಂತರ ವಿಸ್ತಾರಾ ಏರ್ ಲೈನ್ಸ್ ಆದ ಪ್ರಮಾದಕ್ಕೆ ಕ್ಷಮೆಯಾಚಿಸಿದೆ. ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.