ಪುರಾಣದಲ್ಲಿ ನೀವು ಶ್ರವಣ ಕುಮಾರನ ಕಥೆ ಕೇಳಿರಬಹುದು. ಆತ ತನ್ನಿಬ್ಬರು ಅಂಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟಿದ್ದ. ಆದರೆ, ಇಂದಿನ ದಿನಗಳಲ್ಲಿ ಹೆತ್ತ ತಂದೆ-ತಾಯಿಯನ್ನು ಹೊತ್ತುಕೊಳ್ಳುವುದು ಬಿಡಿ, ಸರಿಯಾಗಿ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ತಳ್ಳುವವರೇ ಹೆಚ್ಚು. ಇಂಥವರ ಮಧ್ಯೆ ಈಗಿನ ಕಾಲದಲ್ಲೂ ಶ್ರವಣ ಕುಮಾರನಂಥವರು ಇದ್ದಾರೆ ಎಂಬುದನ್ನು ನಿರೂಪಿಸುವ ವಿಡಿಯೋವೊಂದು ವೈರಲ್ ಆಗಿದೆ.
ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಕನ್ವರ್ ಯಾತ್ರೆಯ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ವಯಸ್ಸಾದ ಪೋಷಕರನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಹಂಚಿಕೊಂಡಿದ್ದಾರೆ.
ಹೌದು, ವ್ಯಕ್ತಿಯೊಬ್ಬ ಪುರಾಣ ಕಾಲದ ಶ್ರವಣಕುಮಾರನಂತೆ ತನ್ನ ವೃದ್ಧ ತಂದೆ-ತಾಯಿಯನ್ನು ಸ್ಕೇಲ್ (ತಕ್ಕಡಿ) ನಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾನೆ. ಆತ ತಕ್ಕಡಿಯ ಕಂಟೇನರ್‌ಗಳ ಬದಲಿಗೆ ಪೋಷಕರು ಕುಳಿತುಕೊಳ್ಳಲು ಸಾಧ್ಯವಾಗುವಷ್ಟು ಸಣ್ಣ ಕುರ್ಚಿಗಳಾಗಿ ಮಾರ್ಪಾಡು ಮಾಡಿದ್ದಾನೆ. ಬಳಿಕ ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ತನ್ನ ಪೋಷಕರು ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆತ ಈ ರೀತಿ ಮಾಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ, ವಯಸ್ಸಾದ ಪೋಷಕರನ್ನು ತಿರಸ್ಕರಿಸುವವರೇ ಹೆಚ್ಚು. ವೃದ್ಧ ತಂದೆ-ತಾಯಿಯನ್ನು ಮಕ್ಕಳು ಮನೆಯಿಂದ ಹೊರಹಾಕುತ್ತಾರೆ. ಇಂಥವರ ಮಧ್ಯೆ ಲಕ್ಷಗಟ್ಟಲೆ ಶಿವಭಕ್ತರಲ್ಲಿ ಒಬ್ಬ ಶ್ರವಣ ಕುಮಾರನಿದ್ದಾನೆ. ಅವನು ತನ್ನ ವೃದ್ಧ ತಂದೆತಾಯಿಗಳೊಂದಿಗೆ ಪಲ್ಲಕ್ಕಿಯಲ್ಲಿ ಕನ್ವರ್ ಯಾತ್ರೆಗೆ ಬಂದಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ವಿಡಿಯೋ ನೋಡಿ ವ್ಯಕ್ತಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.