ವರ್ಷಗಳ ಹಿಂದೆ ಕ್ರಿಮಿನಲ್ ಪ್ರಕರಣ ಎದುರಿಸಿದ್ದರು ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಸಾರ್ವಜನಿಕ ವಲಯದ ಉದ್ಯೋಗವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ನಿರಾಕರಿಸಲಾಗಿದೆ.
ಪ್ರಕರಣದ ವಿವರ: ಪ್ರಮೋದ್ ಸಿಂಗ್ ಎಂಬವರು 2013-14 ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದು, ಆದರೆ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆ 498ಎ ಅಡಿ 2006 ರಲ್ಲಿ ಪ್ರಕರಣ ದಾಖಲಾಗಿದ್ದರ ಹಿನ್ನೆಲೆಯಲ್ಲಿ ಉದ್ಯೋಗ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯಕ್ಕೆ ಹೋಗಿದ್ದು ಅಲ್ಲಿಯೂ ಕೂಡ ಅವರಿಗೆ ನಿರಾಸೆಯಾಗಿತ್ತು.
ಪ್ರಮೋದ್ ಸಿಂಗ್ ಮಧ್ಯಪ್ರದೇಶ ಹೈಕೋರ್ಟಿಗೆ ತೆರಳಿದ್ದು, ಏಕ ಸದಸ್ಯ ಪೀಠದಲ್ಲಿ ಹಿನ್ನಡೆಯಾಗಿತ್ತು. ಜೊತೆಗೆ ಡಿವಿಷನ್ ಬೆಂಚ್ ಕೂಡ ಅರ್ಜಿದಾರನ ವಿರುದ್ಧ ಸೆಕ್ಷನ್ 498ಎ ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು. ಅಂತಿಮವಾಗಿ ಪ್ರಮೋದ್ ಸಿಂಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂದರ್ಭದಲ್ಲಿ 2006ರಲ್ಲಿ ಪತಿ-ಪತ್ನಿ ಪರಸ್ಪರ ಒಪ್ಪಂದದ ಮೇರೆಗೆ ರಾಜಿಯಾಗಿದ್ದನ್ನು ನ್ಯಾಯಾಲಯ ಗಮನಿಸಿದೆ. ಹೀಗಾಗಿ 2013-14ನೇ ಸಾಲಿನಲ್ಲಿ ಅರ್ಜಿದಾರನಿಗೆ ಉದ್ಯೋಗ ನಿರಾಕರಿಸುವುದು ಸೂಕ್ತವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.