ಮನೆಗಳಲ್ಲಿ ಏರ್ ಕಂಡೀಶನ್ ಹೊಂದಿರುವವರಿಗೆ ಶಾಕ್ ನೀಡುತ್ತೆ ಈ ಸುದ್ದಿ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸ್ಪೋಟಗೊಂಡು ಈಗಾಗಲೇ ದುರಂತ ಸಂಭವಿಸಿರುವ ಕೆಲ ಘಟನೆಗಳ ಬೆನ್ನಲ್ಲೇ ಈಗ ಗುರುಗ್ರಾಮದಲ್ಲಿ ಅಂತಹುದೇ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಾತ್ರಿ ಮಲಗಿದ್ದಾಗ ಏರ್ ಕಂಡಿಷನ್ ಸ್ಪೋಟಗೊಂಡ ಪರಿಣಾಮ ಜೀವಂತ ದಹನವಾಗಿದ್ದಾರೆ.
ಭವಾನಿ ಜಿಲ್ಲೆಯ ಕಂಕ್ರೋಲಿ ಮೂಲದ 37 ವರ್ಷದ ಸಂಜಯ್ ಕುಮಾರ್ ಮೃತಪಟ್ಟವರಾಗಿದ್ದು, ಇವರು ಗುರುಗ್ರಾಮದ ಬೋಂಡ್ಸಿ ಯಲ್ಲಿರುವ ಶ್ರೀರಾಮ ಎನ್ ಕ್ಲೈವ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ ಘಟನೆ ನಡೆದ ದಿನ ಅವರ ಪತ್ನಿ ಹಾಗೂ ಪುತ್ರ ಊರಿಗೆ ತೆರಳಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಸಂಜಯ್ ಕುಮಾರ್ ಅವರ ನಿವಾಸದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಅಗ್ನಿಶಾಮಕ ದಳ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದರು. ಅವರು ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಸಂಜಯ್ ಕುಮಾರ್ ತಾವು ಮಲಗಿದ್ದ ಸ್ಥಳದಲ್ಲಿಯೇ ಜೀವಂತ ದಹನವಾಗಿದ್ದರು. ಏರ್ ಕಂಡೀಷನರಿಗೆ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಹೇಳಲಾಗಿದ್ದು, ದುರಂತದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.