ಮನೆಯೊಂದರಲ್ಲಿ ಅಡಿಕೆ ಕದಿಯುತ್ತಿದ್ದಾಗ ಸಿಕ್ಕಿಬಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿರೋ ಘಟನೆ ಕೇರಳ ಜಿಲ್ಲೆಯ ಚೇಲಕ್ಕರದಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.
ವ್ಯಕ್ತಿಯನ್ನು ಥಳಿಸಿದ್ದಕ್ಕಾಗಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಚೇಲಕ್ಕರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಅಡಿಕೆ ವ್ಯಾಪಾರಿಯಾಗಿದ್ದು ಸಂಗ್ರಹಿಸಿಟ್ಟಿದ್ದ ಅಡಿಕೆಯಲ್ಲಿ ಸಣ್ಣ ಪ್ರಮಾಣದಲ್ಲಿ ಅಡಿಕೆ ನಾಪತ್ತೆಯಾಗುತ್ತಿರುವುದನ್ನು ಕಂಡುಕೊಂಡಿದ್ದರು. ಇದರ ಪತ್ತೆಗಾಗಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.
ಶನಿವಾರ ಬೆಳಿಗ್ಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಗಮನಿಸುತ್ತಿದ್ದಾಗ ವ್ಯಾಪಾರಿ ಮತ್ತು ಅವರ ಕುಟುಂಬ ಸದಸ್ಯರು ಅಡಿಕೆಯ ಚೀಲದೊಂದಿಗೆ ವ್ಯಕ್ತಿಯೊಬ್ಬ ಹೋಗುತ್ತಿರುವುದನ್ನು ನೋಡಿದ್ದಾರೆ. ಅವನನ್ನು ಹಿಂಬಾಲಿಸಿ ಹಿಡಿಯುವ ಕಾರ್ಯದಲ್ಲಿ ಆರೋಪಿತ ಕಳ್ಳನ ಮುಖ ಮತ್ತು ತಲೆಗೆ ಗಾಯಗಳಾಗಿವೆ.
ನಂತರ ಸ್ಥಳೀಯ ನಿವಾಸಿಗಳು ಜಮಾಯಿಸಿದಾಗ, ಅವರಲ್ಲಿ ಕೆಲವರು ವ್ಯಕ್ತಿಯನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುವನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದು ಇನ್ನೂ ಅಪಾಯದಿಂದ ಪಾರಾಗಿಲ್ಲ ಎಂದು ಅಧಿಕಾರಿ ಹೇಳಿದರು.