
ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರದೊಳಗೆ ಭಕ್ತರ ಮೇಲೆ ವ್ಯಕ್ತಿಯೊಬ್ಬ ರಾಡ್ ನಿಂದ ದಾಳಿ ನಡೆಸಿದ್ದು, 5 ಜನರಿಗೆ ಗಾಯಗಳಾಗಿವೆ.
ಶುಕ್ರವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಾಡ್ ನಿಂದ ದಾಳಿ ನಡೆಸಿದ್ದು, ಐದು ಭಕ್ತರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ, ಭಟಿಂಡಾದ ಸಿಖ್ ಯುವಕನ ಸ್ಥಿತಿ ಗಂಭೀರವಾಗಿದ್ದು, ಶ್ರೀ ಗುರು ರಾಮ್ ದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಾಳಿಕೋರ ಮತ್ತು ಅವನೊಂದಿಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಮುದಾಯ ಅಡುಗೆಮನೆಯ ಬಳಿಯ ಗುರು ರಾಮ್ ದಾಸ್ ಹೋಟೆಲ್ ಒಳಗೆ ದಾಳಿ ನಡೆದಿದೆ.
ದೇವಾಲಯವನ್ನು ನಿರ್ವಹಿಸುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC), ದಾಳಿಕೋರ ಇದ್ದಕ್ಕಿದ್ದಂತೆ ರಾಡ್ ಎತ್ತಿಕೊಂಡು ಭಕ್ತರಿಗೆ ಹೊಡೆಯಲು ಪ್ರಾರಂಭಿಸಿದ್ದಾನೆ ಎಂದು ಹೇಳಿದೆ.
ತನಿಖೆ ಮುಂದುವರೆದಿದ್ದು, ಆರೋಪಿಗಳ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.
ಆರೋಪಿ ಹರಿಯಾಣದವನು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕಾರಣ ಅವರನ್ನು ತಡೆದ ಕೆಲವು ಎಸ್ಜಿಪಿಸಿ ಸಿಬ್ಬಂದಿಯ ಮೇಲೂ ಅವರು ದಾಳಿ ಮಾಡಿದ್ದಾನೆ. ಗುರುತನ್ನು ಕೇಳಿದಾಗ ವಾಗ್ವಾದ ನಡೆಸಿ ಹೊರಹೋದ ಆತ ಕಬ್ಬಿಣದ ರಾಡ್ನೊಂದಿಗೆ ಹಿಂತಿರುಗಿ ಬಂದು ತಡೆಯಲು ಪ್ರಯತ್ನಿಸಿದ ಸಿಬ್ಬಂದಿ ಮತ್ತು ಭಕ್ತರ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ಆತನನ್ನು ಹಿಡಿದು ಹರಿಯಾಣದ ಜುಲ್ಫಾನ್ ಎಂದು ಗುರುತಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.