ಪ್ರತಿಮೆ ಎಂದು ತಪ್ಪಾಗಿ ಭಾವಿಸಿದ ಪ್ರವಾಸಿಗರೊಬ್ಬರು 12 ಅಡಿ ಉದ್ದದ ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದಾಗ ಅದು ದಾಳಿ ಮಾಡಿರುವ ಆಘಾತಕಾರಿ ನಡೆದಿದೆ.
68 ವರ್ಷದ ನೆಹೆಮಿಯಾಸ್ ಚಿಪಾಡಾ ಎಂಬುವವರು ನವೆಂಬರ್ 10 ರಂದು ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಫಿಲಿಪ್ಪೀನ್ಸ್‌ನ ಕಗಾಯೆನ್ ಡಿ ಓರೊ ಸಿಟಿಯಲ್ಲಿರುವ ಅಮಯಾ ವ್ಯೂ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಮೊಸಳೆಯ ಪ್ರತಿಮೆ ಎಂದು ಭಾವಿಸಿ ಸೆಲ್ಫಿ ತೆಗೆದುಕೊಳ್ಳಲು ಕೊಳಕ್ಕೆ ಹತ್ತಿದ್ದಾರೆ.
ಆದರೆ, ಅದು ಪ್ರತಿಮೆಯಾಗಿರದೆ ನಿಜವಾದ ಮೊಸಳೆಯಾಗಿತ್ತು. 12 ಅಡಿಯ ಮೊಸಳೆ ಆತನ ಮೇಲೆ ದಾಳಿಯೆಸಗಿದೆ. ತನ್ನ ಎಡಗೈಯನ್ನು ಕಚ್ಚಿದಾಗ ಅವರು ಸಹಾಯಕ್ಕಾಗಿ ಕಿರುಚಿದ್ದಾರೆ. ಬಳಿಕ ಕಷ್ಟಪಟ್ಟು ಮೊಸಳೆಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಚಿಪಾಡಾ ತೋಳಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಸಿಬ್ಬಂದಿ ಕರವಸ್ತ್ರ ಕಟ್ಟಿ, ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೊಸಳೆ ದಾಳಿಯಿಂದ ಚಿಪಾಡಾ ಅವರ ಎಡಗೈ ಮತ್ತು ತೊಡೆಯ ಮೇಲೆ ಹೊಲಿಗೆ ಹಾಕಲಾಗಿದೆ. ಅಲ್ಲದೆ, ಚಿಪಾಡಾ ತನ್ನ ಮುರಿದ ಮೂಳೆಗಳನ್ನು ಸರಿಪಡಿಸಲು ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಎಚ್ಚರಿಕೆಯ ಫಲಕಗಳನ್ನು ಹಾಕದಿರುವುದಕ್ಕೆ ಅಮ್ಯೂಸ್‌ಮೆಂಟ್ ಪಾರ್ಕ್ ಅನ್ನು ಚಿಪಾಡಾ ಮತ್ತು ಅವರ ಕುಟುಂಬ ಸದಸ್ಯರು ದೂಷಿಸಿದ್ದಾರೆ.
ಉದ್ಯಾನವನವು ಚಿಪಾಡಾ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿದೆ. ಆದರೆ, ಅಪಾಯಕಾರಿ ಪ್ರಾಣಿಗಳ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡುವಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.