ಕೌಟುಂಬಿಕ ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ, ಮಡದಿಯ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಹಮದಾಬಾದ್ ನ ಒಗ್ನಾಜ್ ನಿವಾಸಿಯಾದ 27 ವರ್ಷ ವಯಸ್ಸಿನ ಮಹಿಳೆಯೊಬ್ಬರ ಮೇಲೆ ಆಕೆ ಪತಿ ಈ ರೀತಿಯ ದೌರ್ಜನ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತನ್ನ ಸಹೋದರ ಸಂಬಂಧಿಗಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನದಿಂದ ಈ ವ್ಯಕ್ತಿ ಹೀಗೆ ವರ್ತಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಇಲ್ಲಿನ ಮೆಹ್ಸಾನಾ ಬಳಿಕ ದೇತ್ಲಿ ಗ್ರಾಮದ ವ್ಯಕ್ತಿಯೊಬ್ಬನನ್ನು ಸಂತ್ರಸ್ತೆ ಕೈಹಿಡಿದಿದ್ದು, ಇದಕ್ಕೆ ಬದಲಾಗಿ ಆಕೆಯ ಸಹೋದರನಿಗೆ ಆಕೆಯ ಪತಿಯ ಸಹೋದರಿಯನ್ನು ಮದುವೆ ಮಾಡಿಕೊಳ್ಳಲಾಗಿದೆ.
“ಮದುವೆಯಾದ ಏಳು ತಿಂಗಳ ಅವಧಿಯಲ್ಲಿ, ನನ್ನ ಪತಿ ಮತ್ತು ಆತನ ಮನೆಯವರು ಕ್ಷುಲ್ಲಕ ಕಾರಣಗಳಿಗೆ ನನ್ನ ಮೇಲೆ ಕಿರುಕುಳು ನೀಡಲು ಆರಂಭಿಸಿದ್ದಾರೆ. ದುಡಿಯದೇ ಇರುವ ನನ್ನ ಪತಿಯ ಬಳಿ ನಾನು ಏನಾದರೂ ದುಡ್ಡು ಕೇಳಿದರೆ ಆತ ನನ್ನ ಮೇಲೆ ಹಲ್ಲೆ ಮಾಡಿ, ಹೆತ್ತವರಿಂದ ದುಡ್ಡು ಪಡೆದು ತರಲು ಹೇಳುತ್ತಿದ್ದ. ಆದರೆ ನಾನು ನನ್ನ ಸಹೋದರನ ಹಿತದೃಷ್ಟಿಯಿಂದ ಮೌನ ವಹಿಸಿದ್ದೆ,” ಎಂದು ತಿಳಿಸಿದ್ದಾರೆ.
ತನ್ನ ಪತಿ ತನ್ನನ್ನು ದೂರ ಇಟ್ಟಿದ್ದು, 2016ರಿಂದ, ಮಗಳು ಜನಿಸಿದಾಗಿನಿಂದ, ತನ್ನ ಹೆತ್ತವರ ಮನೆಯಲ್ಲೇ ವಾಸಿಸುತ್ತಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಹಿರಿಯರ ಮಧ್ಯ ಪ್ರವೇಶದಿಂದಾಗಿ ಸಂತ್ರಸ್ತೆಯನ್ನು ಆಕೆಯ ಪತಿ 2018ರಲ್ಲಿ ಮರಳಿ ಮನೆಗೆ ಕರೆಯಿಸಿಕೊಂಡಿದ್ದ.
ಆದರೆ ಮನೆಗೆ ಮರಳಿದ ನಂತರವೂ ತನ್ನ ಪತಿ ತನ್ನ ಮೇಲೆ ಶಂಕಿಸುತ್ತಾ ಮಾರಣಾಂತಿಕ ಹಲ್ಲೆ ಮಾಡುವುದುನ್ನು ಮುಂದುವರೆಸುತ್ತಿದ್ದುದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದು, ಈ ಪರಿಸ್ಥಿತಿಯಲ್ಲಿ ಅಸಹಾಯಕರಾದ ಕಾರಣ ಆಗಸ್ಟ್ 2021ರಲ್ಲಿ ಕೊನೆಗೂ ತಾನು ತವರು ಮನೆಗೆ ಮರಳಿದ್ದಾಗಿ ಹೇಳಿಕೊಂಡಿದ್ದಾರೆ.