ಕಾರ್ಪೋರೇಟ್ ಜಗತ್ತಿನಲ್ಲಿ ರಜೆ ಪಡೆಯಲು ಸೂಕ್ತ ಕಾರಣಗಳನ್ನು ಸಾಕ್ಷಿಯೊಂದಿಗೆ ತಿಳಿಸಬೇಕು ಎಂಬುದು ಸಾಮಾನ್ಯ ವಿಚಾರ. ಆದರೆ ಹಾಂಕಾಂಗ್‌ನ ಕಂಪನಿಯೊಂದರ ಬಾಸ್ ಒಬ್ಬ ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದ್ದಾನೆ.
ಚೀನೀ ಕುಟುಂಬಗಳು ತಂತಮ್ಮ ಪೂರ್ವಜರ ಸಮಾಧಿಗಳಿಗೆ ತೆರಳಿ ಅವರಿಗೆ ಗೌರವ ಸಲ್ಲಿಸುವ 12 ದಿನಗಳ ’ಚಿಂಗ್ ಮಿಂಗ್’ ಹಬ್ಬದಲ್ಲಿ ಭಾಗಿಯಾಗಲೆಂದು ರಜೆ ಕೇಳಿದ್ದ ಉದ್ಯೋಗಿಯೊಬ್ಬನಿಗೆ ಆತನ ಬಾಸ್ ಮುಂದಿಟ್ಟ ಷರತ್ತಿನ ಬಗ್ಗೆ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ರಜೆ ಬೇಕಿದ್ದಲ್ಲಿ ಪೂರ್ವಜರ ಸಮಾಧಿಗಳ ಚಿತ್ರಗಳನ್ನು ತೆಗೆದು ತನಗೆ ಕಳುಹಿಸುವಂತೆ ಇದೇ ಬಾಸ್ ಆಗ್ರಹಿಸಿದ್ದಾನೆ.
ತನ್ನ ಬಾಸ್‌ನ ಈ ವಿಚಿತ್ರ ಬೇಡಿಕೆ ಕುರಿತು ಫೇಸ್ಬುಕ್‌ನಲ್ಲಿ ಬರೆದುಕೊಂಡ ಈ ಉದ್ಯೋಗಿ, “ನನ್ನ ಪೂರ್ವಜರಿಗೆ ಗೌರವ ಸಲ್ಲಿಸಲು ರಜೆ ತೆಗೆದುಕೊಂಡಿದ್ದೆ, ಆದರೆ ಇದನ್ನು ಸಾಬೀತು ಪಡಿಸಲು ಸಮಾಧಿಗಳ ಫೋಟೋ ತೆಗೆಯುವಂತೆ ಮಾಡಿದರು ನನ್ನ ಬಾಸ್. ಹಾಂಕಾಂಗ್ ಬಾಸ್‌ಗಳು ಭಾರೀ ಹುಚ್ಚರಾಗುತ್ತಿದ್ದು, ನನಗೂ ಹುಚ್ಚು ಹಿಡಿಸುತ್ತಿದ್ದಾರೆ,” ಎಂದು ಬರೆದುಕೊಂಡಿದ್ದಾನೆ ಈ ಉದ್ಯೋಗಿ.
“ನಿನ್ನ ಪೂರ್ವಜರಿಗೆ ಗೌರವ ಸಲ್ಲಿಸಲು ನಿನಗೆ 12 ದಿನಗಳ ರಜೆ ನಿಜಕ್ಕೂ ಅಗತ್ಯವಿದೆಯೇ?” ಎಂದು ಬಾಸ್ ಈತನನ್ನು ಪ್ರಶ್ನಿಸಿದ್ದಾನೆ.
ಈ ತಿಂಗಳು ನಡೆಯಲಿರುವ ’ಸಮಾಧಿ ಗುಡಿಸುವ’ ಈ ಹಬ್ಬಕ್ಕೆ ಹಾಂಕಾಂಗ್‌ನಿಂದ ದೇಶದ ಆಂತರಿಕ ಪ್ರದೇಶಗಳಿಗೆ ತೆರಳುತ್ತಿದ್ದಾರೆ ಎಂದು ಈ ಪತ್ರಿಕೆ ವರದಿ ಮಾಡಿದೆ. ಕೋವಿಡ್-19 ನಿರ್ಬಂಧಗಳ ಕಾರಣ ಮೂರು ವರ್ಷಗಳ ಬಳಿಕ ’ಚಿಂಗ್ ಮಿಂಗ್’ ಆಚರಣೆ ಮಾಡಲಾಗುತ್ತಿದೆ.