ಯಾಕೆ ಇನ್ನೂ ಮದುವೆ ಆಗಿಲ್ಲಾ? ಯಾವಾಗ ನಿನ್ನ ಮದ್ವೆ? ಇನ್ನು ಎಷ್ಟು ದಿನ ಮದುವೆ ಆಗದೇ ಇರ್ತೀಯಾ? ಮದುವೆ ವಯಸ್ಸು ಮೀರ್ತಿದ್ರೂ ಯಾಕೆ ಮದುವೆ ಆಗಿಲ್ಲ ಅನ್ನೋ ಮಾತುಗಳು ಪ್ರಪಂಚದಾದ್ಯಂತ ಸಾಮಾನ್ಯ.
ಈ ರೀತಿ ಪದೇ ಪದೇ ಮದುವೆ ಬಗ್ಗೆ ಕೇಳುವವರಿಗೆ ನಿಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟು ಸಾಕಾಗಿ ಹೋಗಿದೆಯಾ? ಅಥವಾ ಅಂಥವರ ಪ್ರಶ್ನೆಗೆ ಉತ್ತರಿಸದೇ ಸುಮ್ಮನಿದ್ದುಬಿಡ್ತೀರಾ? ಆದ್ರೆ ಇಂಡೋನೇಷ್ಯಾದಲ್ಲಿ ನಡೆದ ಘಟನೆ ಕೇಳಿದ್ರೆ ಬೆಚ್ಚಿಬೀಳ್ತೀರ.
ಮದುವೆ ಬಗೆಗಿನ ಪ್ರಶ್ನೆಯು ಇಂಡೋನೇಷ್ಯಾದಲ್ಲಿ ಮನುಷ್ಯನಿಗೆ ಮಾರಣಾಂತಿಕವಾಗಿದೆ. ಇನ್ನೂ ಏಕೆ ಮದುವೆಯಾಗಿಲ್ಲ ಎಂದು ನಿರಂತರವಾಗಿ ಕೇಳುತ್ತಿದ್ದ ನೆರೆ ಮನೆಯ 60 ವರ್ಷದ ವ್ಯಕ್ತಿಯನ್ನು 45 ವರ್ಷದ ವ್ಯಕ್ತಿ ಕೊಂದು ಹಾಕಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜುಲೈ 29 ರಂದು ಉತ್ತರ ಸುಮಾತ್ರಾದಲ್ಲಿ ಪರ್ಲಿಂಡುಂಗನ್ ಸಿರೆಗಾರ್ ತನ್ನ ನೆರೆಯ ಅಸ್ಗಿಮ್ ಇರಿಯಾಂಟೊ ಎಂಬಾತನ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ಇರಿಯಾಂಟೊ ನಾಗರಿಕ ಸೇವೆಯಿಂದ ನಿವೃತ್ತಿಯಾಗಿದ್ದರು ಎಂದು ಪ್ರದೇಶದ ಸಹಾಯಕ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಸಿರೆಗಾರ್ ತಮ್ಮ ಮನೆಗೆ ನುಗ್ಗಿ ಯಾವುದೇ ಎಚ್ಚರಿಕೆ ನೀಡದೆ ಪತಿ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ಅಸ್ಗಿಮ್ ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಇರಿಯಾಂಟೊ ಮನೆಯಿಂದ ಹೊರಗೆ ಓಡಿ ಬಂದಾಗ ತಲೆಗೆ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಸಿರೆಗಾರ್ ಸುಮ್ಮನಾಗದೇ ಹೊಡೆಯುವುದನ್ನು ಮುಂದುವರೆಸಿದ. ಅಕ್ಕಪಕ್ಕದ ಮನೆಯವರು ಮಧ್ಯ ಪ್ರವೇಶಿಸಿ ದಾಳಿ ನಿಲ್ಲಿಸಿದರು. ಪತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಮಾರ್ಗಮಧ್ಯದಲ್ಲಿ ನಿಧನರಾದರು ಎಂದು ಮೃತನ ಪತ್ನಿ ಹೇಳಿದ್ದಾಳೆ.
ವಿಚಾರಣೆಯ ಸಮಯದಲ್ಲಿ ಸಿರೆಗರ್, ನನ್ನ ಮದುವೆ ಬಗ್ಗೆ ನಿರಂತರವಾಗಿ ಪ್ರಶ್ನಿಸುತ್ತಿದ್ದರಿಂದ ಇರಿಯಾಂಟೊನನ್ನು ಕೊಲ್ಲಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾನೆ. ಇಬ್ಬರೂ ಸೌಹಾರ್ದ ಸಂಬಂಧವನ್ನು ಹೊಂದದೇ ಆಗಾಗ್ಗೆ ಕ್ಷುಲ್ಲಕ ವಿಷಯಗಳಿಗೆ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.