ಲಖನೌ: ಮುಂಬೈನ 23 ವರ್ಷದ ಮಹಿಳೆಯೊಬ್ಬಳ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 50 ವರ್ಷದ ವ್ಯಕ್ತಿಯನ್ನು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಯನ್ನು ಅಂಬೇಡ್ಕರ್ ನಗರ ನಿವಾಸಿ ಮೌಲಾನಾ ಸೈಯದ್ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ತನ್ನ ಪತಿಗೆ ಆರೋಗ್ಯ ಸಮಸ್ಯೆಗಳಿರುವ ಕಾರಣ ಸಂಬಂಧಿಕರ ಸಲಹೆಯ ಮೇರೆಗೆ ಪ್ರದೇಶದ ದರ್ಗಾವೊಂದಕ್ಕೆ ತನ್ನ ಪತಿ ಮತ್ತು ಅತ್ತೆಯೊಂದಿಗೆ, ಭೇಟಿ ನೀಡಿದ್ದರು.
ಪೊಲೀಸರ ಪ್ರಕಾರ, ಪ್ರಕರಣದ ದೂರುದಾರರಾಗಿರುವ ಸಂತ್ರಸ್ತೆಯ ಪತಿ ಅವರು ಮಾರ್ಚ್ 7 ರಂದು ಜಿಲ್ಲೆಗೆ ಆಗಮಿಸಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ. ತರುವಾಯ, ಅವರು ಮೌಲಾನಾ ಅಶ್ರಫ್ ಅವರನ್ನು ಭೇಟಿಯಾಗಿದ್ದು, ಅವರು ಆಧ್ಯಾತ್ಮಿಕ ಚಿಕಿತ್ಸೆಯ ಮೂಲಕ ದುಃಖವನ್ನು ನಿವಾರಿಸುವ ಭರವಸೆ ನೀಡಿದ್ದಾರೆ.
ದೂರುದಾರರ ಪ್ರಕಾರ, ಆರೋಪಿ ಮಹಿಳೆಯನ್ನು ಉದ್ದೇಶಿತ ಪರಿಹಾರಕ್ಕಾಗಿ ಅತಿಥಿ ಗೃಹದ ಕೋಣೆಗೆ ಕರೆದೊಯ್ದರು. ಇತರ ಕುಟುಂಬ ಸದಸ್ಯರಿಗೆ ಹೊರಗೆ ಇರುವಂತೆ ಸೂಚಿಸಿದರು. ಒಂದು ಗಂಟೆಯ ನಂತರ ಕೋಣೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಮನೆಯವರು ಆತಂಕಕ್ಕೊಳಗಾಗಿ ಬಾಗಿಲು ಬಡಿಯಲು ಪ್ರಾರಂಭಿಸಿದಾಗ ಆರೋಪಿ ಕೊನೆಗೆ ಬಾಗಿಲು ತೆರೆದು ಅತಿಥಿ ಗೃಹದಿಂದ ಪರಾರಿಯಾಗಿದ್ದಾನೆ.
ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂಬಂಧಿಕರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಬಹಿರಂಗಪಡಿಸಿದ್ದಾರೆ. ಕುಟುಂಬದವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅತ್ಯಾಚಾರ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ. ಸಂತ್ರಸ್ತೆಯ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಇನ್ನೂ ದಾಖಲಿಸಬೇಕಾಗಿದೆ ತನಿಖೆಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.