ಸಂಗಾತಿಯ ಮೃತದೇಹ ಕತ್ತರಿಸಿ ದೇಹದ ಭಾಗಗಳನ್ನು ಬೇಯಿಸಿ ನಾಯಿಗೆ ತಿನ್ನಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಫ್ಲಾಟ್ ನಿಂದ 56 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ಲಿವ್-ಇನ್ ಪಾಲುದಾರಳ ಕತ್ತರಿಸಿದ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಬ್ಬರು ಮೂರು ವರ್ಷಗಳಿಂದ ವಾಸಿಸುತ್ತಿದ್ದ ಫ್ಲಾಟ್‌ನಿಂದ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ತಂಡ ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಸರಸ್ವತಿ ವೈದ್ಯ ಅವರ ಶವ ಪತ್ತೆಯಾಗಿದೆ. ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ. ಮನೋಜ್ ಸಾನೆ ತನ್ನ ಸಂಗಾತಿಯ ದೇಹವನ್ನು ಕತ್ತರಿಸಿ ಕುದಿಸಿ ನಾಯಿಗಳಿಗೆ ಆಹಾರವಾಗಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆದಿದೆ.
ಬುಧವಾರ ಕೊಲೆ ಆರೋಪದ ಮೇಲೆ ಮನೋಜ್ ನನ್ನು ಬಂಧಿಸಲಾಗಿದ್ದು, ಆಕೆಯ ದೇಹದ ಕೆಲವು ಭಾಗಗಳನ್ನು ಕತ್ತರಿಸಿದ ಬಳಿಕ ಕುದಿಸಿ ಬೀದಿನಾಯಿಗಳಿಗೆ ತಿನ್ನಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಅಪಾರ್ಟ್‌ಮೆಂಟ್‌ನಲ್ಲಿ ಬಕೆಟ್ ಮತ್ತು ಬೌಲ್‌ಗಳಲ್ಲಿ ವೈದ್ಯ ಅವರ ಕೊಳೆತ ಅವಶೇಷಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಡುಗೆಮನೆಯಲ್ಲಿ ಸಂತ್ರಸ್ತೆಯ ಎರಡೂ ಪಾದಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಮನೋಜ್ ಸಾನೆ ಮೂರ್ನಾಲ್ಕು ದಿನಗಳ ಹಿಂದೆ ಸರಸ್ವತಿ ವೈದ್ಯರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದಾಗ್ಯೂ ಆರೋಪಿಯು ಜೂನ್ 4 ರಂದು ತನ್ನ ಸಂಗಾತಿ ವಿಷ ಸೇವಿಸಿದ್ದಾನೆ ಎಂದು ಹೇಳಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆಗಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸುವ ಭಯದಿಂದ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡಲು ನಿರ್ಧರಿಸಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ರೂಮ್ ಫ್ರೆಶ್ನರ್ ಸಿಂಪಡಿಸಿ ದುರ್ವಾಸನೆ ಮರೆಮಾಚಲು ಯತ್ನಿಸಿದ್ದರು ಎಂದು ಆತನ ನೆರೆಹೊರೆಯವರು ಹೇಳಿದ್ದಾರೆ. ಕಳೆದೆರಡು ದಿನಗಳಿಂದ ಸಾನೆ ಅವರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ಅವರ ಪಕ್ಕದ ಮನೆಯವರು ಹೇಳಿದ್ದಾರೆ. ಅವನು ಹೊರಗೆ ಹೋದಾಗಲೆಲ್ಲಾ ಅವನ ಸಂಗಾತಿ ಜೊತೆಗಿರಲಿಲ್ಲ. ಏನಾದರೂ ತಪ್ಪಾಗಿದೆ ಎಂದು ಆತಂಕಗೊಂಡ ನೆರೆಹೊರೆಯವರು ಪೊಲೀಸರಿಗೆ, ಹೌಸಿಂಗ್ ಸೊಸೈಟಿಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.