ಬವಾನಾ: ಒಬ್ಬ ಮಹಿಳೆಯನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಉಂಟಾದ ಜಗಳದಲ್ಲಿ 35 ವರ್ಷದ ವ್ಯಕ್ತಿ ಮತ್ತವನ ಇಬ್ಬರು ಸಹಚರರು ನವದೆಹಲಿಯ ಬವಾನಾದಲ್ಲಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಜನವರಿ 8 ರ ರಾತ್ರಿ ಪ್ರಕಾಶ್ (26) ಎಂಬಾತ ತನ್ನ ಅಂಗಡಿಯ ಮುಂದೆ ಆಸಿಡ್ ದಾಳಿಗೆ ಒಳಗಾಗಿದ್ದಾನೆ. ಆರೋಪಿಗಳು ಕಾರಿನಲ್ಲಿ ಬಂದು ಆಸಿಡ್ ಎರಚಿ ಪರಾರಿಯಾಗಿದ್ದರು.
ಮುಖಕ್ಕೆ ಗಾಯಗಳಾದ ಪೀಡಿತನನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಡಿತನ ಬಲಗಣ್ಣಿನ ದೃಷ್ಟಿ ಕಡಿಮೆಯಾಗಿದೆ ಎಂದು ತಿಳಿದುಬಂದಿದ್ದು, ಹಾನಿ ಶಾಶ್ವತವಾಗಿದೆಯೇ ಎಂಬುದನ್ನು ತಿಳಿಯಲು ಕೆಲವು ದಿನಗಳು ಬೇಕಾಗುತ್ತದೆ. ಪೊಲೀಸರು ಮುಖೇಶ್ (35), ದೀಪಾಂಶು ಮತ್ತು ಸೂರಜ್ (ಇಬ್ಬರ ವಯಸ್ಸು 24) ಎಂಬ ಆರೋಪಿಗಳನ್ನು ಗುರುತಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ದೀಪಾಂಶು ಮುಖ್ಯ ಆರೋಪಿ ಎನ್ನಲಾಗಿದೆ.
ಆರೋಪಿ ಮುಖೇಶ್ ಮತ್ತು ಪೀಡಿತ ಇಬ್ಬರೂ ಒಬ್ಬೇ ಮಹಿಳೆಯನ್ನು ಪ್ರೀತಿಸುತ್ತಿದ್ದರು. “ಇದರಿಂದಾಗಿ ಒಂದು ವರ್ಷದ ಹಿಂದೆ ಅವರ ನಡುವೆ ಜಗಳ ನಡೆದಿತ್ತು. ಸೇಡು ತೀರಿಸಿಕೊಳ್ಳಲು ಆರೋಪಿ ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಪೀಡಿತನ ಮುಖಕ್ಕೆ ಆಸಿಡ್ ಎರಚಿದ್ದಾನೆ” ಎಂದು ಅಧಿಕಾರಿಯೊಬ್ಬರು ಹೇಳಿದರು. ರಾಸಾಯನಿಕವನ್ನು ಪೂರೈಸಿದ ವ್ಯಕ್ತಿಯ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.