ವಾಟ್ಸಾಪ್ ಗ್ರೂಪ್ಗಳು ಅಂದರೆ ಎಲ್ಲರಿಗೂ ಇಷ್ಟವೇ. ಆದರೆ ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ಅಂದರೆ ಮೂಗು ಮುರಿಯುವವರೇ ಜಾಸ್ತಿ. ನಿಮ್ಮ ಮನೆಯ ವಾಟ್ಸಾಪ್ ಗ್ರೂಪ್ ಅಂದರೇನೆ ನಿಮಗೆ ಅಸಡ್ಡೆ ಭಾವನೆ ಇರಬೇಕಾದರೆ ಬೇರೆಯವರ ಮನೆಯ ವಾಟ್ಸಾಪ್ ಗ್ರೂಪ್ಗೆ ಸೇರಿಸಿಬಿಟ್ಟರೆ ಏನು ಮಾಡ್ತೀರಿ..?
ಪೀಟರ್ ಎಂಬ ಹೆಸರಿನ ವ್ಯಕ್ತಿ ಇಂತಹದ್ದೊಂದು ಅನುಭವವನ್ನ ಪಡೆದಿದ್ದಾರೆ. ತಪ್ಪಾಗಿ ಇವರನ್ನ ಯಾರದ್ದೋ ಮನೆಯ ವಾಟ್ಸಾಪ್ ಗ್ರೂಪ್ಗೆ ಸೇರಿಸಲಾಗಿತ್ತು. ಹಾಗೂ ಪೀಟರ್ ಬರೋಬ್ಬರಿ 6 ತಿಂಗಳುಗಳ ಕಾಲ ಈ ಗ್ರೂಪ್ನ ಸದಸ್ಯರಾಗಿ ಇದ್ದರೂ ಸಹ ಒಬ್ಬ ಕುಟುಂಬ ಸದಸ್ಯನಿಗೂ ತಮ್ಮ ತಪ್ಪಿನ ಅರಿವಾಗಿರಲಿಲ್ಲ.
ಟ್ವಿಟರ್ ಬಳಕೆದಾರ ಜೊನ್ನೊ ಹಾಪ್ಕಿನ್ಸ್ ಎಂಬವರು ತಮ್ಮ ತಂದೆ ಗ್ರೂಪ್ ಚಾಟ್ಗಳನ್ನ ಇಷ್ಟ ಪಡೋದಿಲ್ಲ ಎಂದೇ ಭಾವಿಸಿದ್ದರು. 6 ತಿಂಗಳಿನಿಂದ ಜೊನ್ನೋ ಪೀಟರ್ರನ್ನ ತಮ್ಮ ತಂದೆ ಎಂದೇ ಭಾವಿಸಿದ್ದರಂತೆ. ಕುಟುಂಬ ಸದಸ್ಯರು ಹೆಚ್ಚಾಗಿ ಮಾತನಾಡ್ತಾ ಇಲ್ಲವಾದ್ದರಿಂದ ಜೊನ್ನೋ ಈ ವಾಟ್ಸಾಪ್ ಗ್ರೂಪ್ನ್ನು ರಚಿಸಿದ್ದರು. ಆದರೆ ತಮ್ಮ ತಂದೆಯ ಜಾಗದಲ್ಲಿ ತಪ್ಪಾಗಿ ಪೀಟರ್ ಎಂಬಾತನನ್ನ ಗ್ರೂಪ್ಗೆ ಸೇರಿಸಲಾಗಿದೆ.
ಒಂದಿನ ಜೊನ್ನೋ ತನ್ನ ತಂದೆ – ಮಗ ಮಾತನಾಡುತ್ತಿದ್ದ ವೇಳೆ ಈ ಪ್ರಮಾದ ಬೆಳಕಿಗೆ ಬಂದಿದೆ. ಬರೋಬ್ಬರಿ ಆರು ತಿಂಗಳುಗಳ ಕಾಲ ಪೀಟರ್ ಈ ಕುಟುಂಬಸ್ಥರ ಮೆಸೇಜ್ಗಳನ್ನ ಓದಿ ಸುಮ್ಮನಾಗುತ್ತಿದ್ದರು ಎನ್ನಲಾಗಿದೆ. ಅಂದ ಹಾಗೆ ಈ ಪೀಟರ್ ಪ್ಲಂಬರ್ ಆಗಿದ್ದು ಜೊನ್ನೋ ಮನೆಯ ವಾಷಿಂಗ್ ಮಷಿನ್ ರಿಪೇರಿ ಮಾಡಲು ಬರುತ್ತಿದ್ದರು ಎನ್ನಲಾಗಿದೆ.