ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಶಂಕರ್ ಮಿಶ್ರಾನನ್ನು ದೆಹಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಶಂಕರ್ ಮಿಶ್ರಾನನ್ನು ಜನವರಿ 21ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ಜಾಮೀನು ಅರ್ಜಿಯನ್ನು ಜ. 11ರಂದು ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.
ಈ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿತ್ತು. ಮದ್ಯದ ಅಮಲಿನಲ್ಲಿದ್ದ ಮಿಶ್ರಾ ಬೆತ್ತಲಾಗಿ, ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ್ದ. ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಆತನ ವಿರುದ್ಧ ತನಿಖೆ ಶುರುವಾಗಿತ್ತು.
ಇದೀಗ ವಿಚಾರಣೆ ಪೂರ್ಣಗೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ. ಘಟನೆ ನಂತರ ತಲೆ ಮರೆಸಿಕೊಂಡಿದ್ದ ಈತನನ್ನು ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.
ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿರುವ ಸಹೋದರಿಯ ಮನೆಗೆ ಹೋಗಿದ್ದ ಮಿಶ್ರಾನನ್ನು ಅರೆಸ್ಟ್ ಮಾಡಲಾಗಿದೆ. ನಂತರ ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು.