ಗುಜರಾತ್ನ ವಲ್ಸಾದ್ ಜಿಲ್ಲೆಯ ಮೋತಿವಾಡ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಹತ್ತು ದಿನಗಳ ನಂತರ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ವಾಪಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಆಕೆಯನ್ನು ಕೊಂದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲಿನಲ್ಲಿ ನಡೆದ ಮೂರು ಕೊಲೆಗಳಲ್ಲೂ ಆರೋಪಿ ಭಾಗಿಯಾಗಿರುವುದು ಸೇರಿದಂತೆ ಹಲವು ಆಘಾತಕಾರಿ ಸಂಗತಿಗಳು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದ್ದು, ಕಳೆದ 25 ದಿನಗಳಲ್ಲಿ ಒಟ್ಟು ಐದು ಕೊಲೆಗಳು ಈತನಿಂದ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೋತಿವಾಡ ಗ್ರಾಮದ ರೈಲ್ವೆ ಹಳಿ ಬಳಿ ಅನುಮಾನಾಸ್ಪದವಾಗಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಲ್ಸಾದ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಆರೋಪಿಯನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿದ್ದರು.
ಸೂರತ್ನಲ್ಲಿ ನಡೆದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಕತ್ತು ಹಿಸುಕಿ ಸಾಯಿಸಲಾಗಿದೆ ಎಂಬುದು ಬಹಿರಂಗವಾಗಿತ್ತು.
ಹರ್ಯಾಣ ಮೂಲದ ಆರೋಪಿ ರಾಹುಲ್ ಸಿಂಗ್, ಮಾದಕ ದ್ರವ್ಯ ಸೇವನೆ ಮತ್ತು ಅಪರಾಧ ಚಟುವಟಿಕೆಯ ಇತಿಹಾಸವನ್ನು ಹೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ದಿನ, ಆರೋಪಿ ಸಂತ್ರಸ್ತೆಯನ್ನುಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರೈಲ್ವೆ ನಿಲ್ದಾಣದಿಂದ ಹಿಂಬಾಲಿಸಿದ್ದ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಅಪರಾಧ ಸ್ಥಳದಿಂದ ಬಟ್ಟೆಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿದ್ದು, ಈ ಬಟ್ಟೆಗಳು ಆರೋಪಿಗೆ ಸಂಬಂಧಿಸಿರಬಹುದು ಎಂದು ಶಂಕಿಸಿ, ವಾಪಿ ರೈಲು ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಂತಿಮವಾಗಿ ಶಂಕಿತನನ್ನು ಗುರುತಿಸಲು ಮತ್ತು ಬಂಧಿಸಲು ಕಾರಣವಾಯಿತು.
ವಲ್ಸಾದ್ ಜಿಲ್ಲೆಯ ಪೊಲೀಸರು, ಈ ಸರಣಿ ಹಂತಕನ ಇತರೆ ಕೃತ್ಯಗಳ ಮಾಹಿತಿ ತಿಳಿಯಲು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಿದ್ದಾರೆ. ಆರೋಪಿ ಚಲನವಲನವನ್ನು ಪತ್ತೆ ಹಚ್ಚಲು 2,000 ಗಂಟೆಗಳ ಸಿಸಿ ಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದರು. ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳು, ಗೃಹ ರಕ್ಷಕರು ಮತ್ತು ರೈಲ್ವೆ ಪೊಲೀಸರು ಸೇರಿದಂತೆ 400 ಕ್ಕೂ ಹೆಚ್ಚು ಸಿಬ್ಬಂದಿಗಳ ಪಡೆ ಕಾರ್ಯ ನಿರ್ವಹಿಸಿತ್ತು.