ಕೊಲ್ಕೊತ್ತಾ: ಮನೆಬಾಗಿಲಿಗೆ ಪಡಿತರ ಪೂರೈಕೆ, 5 ಲಕ್ಷ ಉದ್ಯೋಗದ ಭರವಸೆ ಸೇರಿ ಹಲವು ಭರವಸೆ ಒಳಗೊಂಡ ಪ್ರಣಾಳಿಕೆಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮನೆಬಾಗಿಲಿಗೆ ಪಡಿತರ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನಮ್ಮ ಸರ್ಕಾರ ನಿರುದ್ಯೋಗವನ್ನು ಕಡಿಮೆ ಮಾಡಲಿದೆ. ಒಂದು ವರ್ಷದ ಒಳಗೆ 5 ಲಕ್ಷ ಉದ್ಯೋಗಾವಕಾಶ ಕಲ್ಪಿಸಲಾಗುವುದು. ನಮ್ಮ ಕಾರ್ಯವನ್ನು ವಿಶ್ವ ಪ್ರಶಂಸಿಸಿದೆ. ವಿಶ್ವಸಂಸ್ಥೆಯಿಂದಲೂ ಪ್ರಶಸ್ತಿ ಬಂದಿವೆ ಎಂದು ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರೈತರ ಆದಾಯವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಬಡತನವನ್ನು ಶೇಕಡ 40 ರಷ್ಟು ಕಡಿಮೆ ಮಾಡಲಾಗಿದೆ. ಬಡವರಿಗೆ ವಾರ್ಷಿಕ ಆರ್ಥಿಕ ಸಹಾಯ ಖಾತರಿ ಯೋಜನೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಜಾತಿ ಪಲಾನುಭವಿಗಳಿಗೆ ವಾರ್ಷಿಕ 6000 ರೂ., ಹಿಂದುಳಿದ ಸಮುದಾಯಕ್ಕೆ 12,000 ರೂ., ಸಾಮಾನ್ಯ ವರ್ಗದ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 500 ರೂಪಾಯಿ, ಪರಿಶಿಷ್ಟ ವರ್ಗದ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 1 ಸಾವಿರ ರೂ. ನೀಡಲಾಗುವುದು.
ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ ನೆರವಿನ ಮೊತ್ತವನ್ನು ಎಕರೆಗೆ 6 ಸಾವಿರ ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗುವುದು.
ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಕ್ರೆಡಿಟ್ ಕಾರ್ಡ್ ಪರಿಚಯಿಸಲಾಗುವುದು. ಶೇಕಡ 4 ರಷ್ಟು ಬಡ್ಡಿಯನ್ನು ಮಾತ್ರ ವಿಧಿಸಲಾಗುತ್ತದೆ. ಸುಲಭವಾಗಿ ಮರುಪಾವತಿ ಮಾಡುವ ಅವಕಾಶವಿದೆ, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.