ಕೊಲ್ಕೊತ್ತ: ಪಶ್ಚಿಮ ಬಂಗಾಳಕ್ಕೆ ಅನುದಾನ ತಡೆಹಿಡಿಯುವ ವಿವಾದದ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಂಜೆ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ರಾಜ್ಯದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಅವರು ಹೂಗ್ಲಿ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಶುಕ್ರವಾರ ರಾತ್ರಿ ಕೋಲ್ಕತ್ತಾದ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಕೇಂದ್ರವು 1.18 ಲಕ್ಷ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಮಮತಾ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರವು ಸೋಮವಾರದಿಂದ ಸರಿಸುಮಾರು 30 ಲಕ್ಷ MGNREGA ಕಾರ್ಮಿಕರಿಗೆ ಬಾಕಿ ಪಾವತಿ ಪ್ರಾರಂಭಿಸಿತು, ಇದು 2,700 ಕೋಟಿ ರೂ.ಗಳಾಗಿದ್ದು, ಮಾರ್ಚ್ 2022 ರಿಂದ ಬಾಕಿ ಉಳಿದಿದೆ. ಪಶ್ಚಿಮ ಬಂಗಾಳದ MGNREGA ಬಾಕಿಯನ್ನು ಕೇಂದ್ರವು ತಡೆಹಿಡಿದ ವಿಚಾರ ಕಳೆದ ವರ್ಷದಿಂದ ರಾಜಕೀಯ ಚರ್ಚೆಯಲ್ಲಿ ಕೇಂದ್ರಬಿಂದುವಾಗಿದೆ.